ಮೂಡುಬಿದಿರೆ : ರಾಜ್ಯಮಟ್ಟದ ಯುವಜನಮೇಳ ಸಮಾರೋಪ, ಮೈಸೂರು, ಬೆಂಗಳೂರು ವಿಭಾಗಗಳಿಗೆ ಪ್ರಶಸ್ತಿ
ಮೂಡುಬಿದರೆ: ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದಿರೆ ಪುರಸಭೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಜಿಲ್ಲಾ ಯುವಜನ ಒಕ್ಕೂಟ ಹಾಗೂ ಪಡುಮಾರ್ನಾಡು ಯುವಕ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ 2014-15ನೇ ಸಾಲಿನ ಯುವಜನಮೇಳದಲ್ಲಿ ಯುವತಿಯರ ವಿಭಾಗದಲ್ಲಿ ಮೈಸೂರು ವಿಭಾಗ ಹಾಗೂ ಯುವಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಗುರುವಾರ ಸಂಜೆ ಸಮಾಪನಗೊಂಡ ಯುವಜನ ಮೇಳದಲ್ಲಿ ಯುವಜನ ಸೇವೆ, ಕ್ರೀಡೆ ಹಾಗೂ ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿ, ಬಹುಮಾನ ವಿತರಿಸಿ ಮಾತನಾಡಿ ಯುವಜನಮೇಳಗಳಿಗೆ ನೀಡುತ್ತಿರುವ ಪ್ರೋತ್ಸಾಹದವನ್ನು ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಯುವಕಮಂಡಲಗಳ ನೋಂದಣಿಯಲ್ಲಿ ಆಗಿರುವ ಲೋಪದೋಷಗಳನ್ನು ನಿವಾರಿಸುವ ಕೆಲಸ ಮಾಡುತ್ತೇವೆ. ಯುವಜನಮೇಳಗಳಿಗೆ ಸಕ್ರಿಯವಾಗಿ ಪಾಲ್ಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಯುವಜನಮೇಳಗಳ ಗುಣಮಟ್ಟದ ಸುಧಾರಣೆಗೆ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಲಾಗುವುದು ಎಂದು ಹೇಳಿದರು. 2014-15ನೇ ಸಾಲಿನ ರಾಜ್ಯಮಟ್ಟದ ಯುಜನಮೇಳವು ಹಾಸನದಲ್ಲಿ ನಡೆಯಬೇಕಾಗಿತ್ತು. ಆದರೆ ಕೊನೆ ಹಂತದಲ್ಲಿ ತಮಗೆ ಅಸಾಧ್ಯವೆಂದು ಅಲ್ಲಿಯವರು ಕೈಬಿಟ್ಟಿದ್ದರು. ಯುವಕರು ಪ್ರತಿಭೆಗೆ ವೇದಿಕೆಯಿಲ್ಲದೆ ಅವಕಾಶ ವಂಚಿತರಾಗಬೇರಾದೆಂದು ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ. ಹೊರಗಡೆಯಿಂದ ದೇಣಿಗೆ ಸಂಗ್ರಹಿಸದೆ ಮಾದರಿ ಯುವಜನಮೇಳವನ್ನು ಆಯೋಜಿಸಲು ಆಳ್ವಾಸ್ ಸಂಸ್ಥೆ ಸಂಪೂರ್ಣ ನೆರವು ನೀಡಿದೆ. ಮುಂದಿನ ವರ್ಷ ಉಡುಪಿಯಲ್ಲಿ ರಾಜ್ಯಮಟ್ಟದ ಯುವಜನಮೇಳ ನಡೆಯಲಿದೆ ಎಂದು ಅಭಯಚಂದ್ರ ಜೈನ್ ಹೇಳಿದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ್ ಸಾಲ್ಯಾನ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಯುವಕಮಂಡಲಗಳ ನೋಂದಾಣಿ ಪ್ರಕ್ರಿಯೆಯಲ್ಲಿನ ಜಟಿಲ ಕಾನೂನಿಂದಾಗಿ ಯುವಕಮಂಡಲಗಳು ಸರ್ಕಾರದ ಯುವಜನಮೇಳಗಳಿಂದ ವಂಚಿತವಾಗುತ್ತಿದೆ. ಭಾಗವಹಿಸುವ ತಂಡಗಳಿಗೂ ಹಣಕಾಸಿನ ತೊಂದರೆಯಾಗುತ್ತಿವೆ. ರಾಜ್ಯಮಟ್ಟದಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ಕನಿಷ್ಠ 25 ಸಾವಿರ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ತಾಲೂಕು ಮಟ್ಟದಲ್ಲೂ ನಗದು ಬಹುಮಾನ ನೀಡಬೇಕು. ಗ್ರಾಮೀಣ ಮಟ್ಟದ ಯುವಕ-ಯುವತಿಮಂಡಲಗಳಿಗೆ ಶೇ.2 ಅನುದಾನಕ್ಕೆ ಅವಕಾಶವಿದ್ದು, ಅದನ್ನು ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಯುವಜನಮೇಳದ ತಾಂತ್ರಿಕ ನಿರ್ದೇಶಕ ಜೀವನ್ ರಾಮ್ ಸುಳ್ಯ, ಸಹನಿರ್ದೇಶಕರಾದ ಲೀಲಾಧರ, ವಾಣಿ ಅವರನ್ನು ಗೌರವಿಸಲಾಯಿತು
ಮಾಜಿ ಸಚಿವ ಅಮರನಾಥ ಶೆಟ್ಟಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ತಾ.ಪಂ ಸದಸ್ಯೆ ವನಿತಾ ನಾಯ್ಕೆ, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭೆ ಸದಸ್ಯ ರತ್ನಕಾರ ದೇವಾಡಿಗ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ರಾಜ್ಯ ಯುವಜನ ಒಕ್ಕೂಟದ ಪ್ರ.ಕಾ ಡಾ.ಎಸ್.ಬಾಲಾಜಿ, ಜಿಲ್ಲಾ ಒಕ್ಕೂಟದ ಶೈಲೇಶ್ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಸುರೇಶ್ ರೈ, ತಾಲೂಕು ಒಕ್ಕೂಟದ ಅಧ್ಯಕ್ಷ ಯಶೋಧರ ಕರ್ಕೆರಾ ಭಾಗವಹಿಸಿದರು. ವಿವಿಧ ತಾಲೂಕುಗಳ ಕ್ರೀಡಾಧಿಕಾರಿಗಳಾದ ಪ್ರಭಾಕರ ನಾರಾವಿ, ದೇವರಾಜ್, ನವೀನ್ ಎಸ್, ಲಿಲ್ಲಿ ಪಾಯಸ್ ಪಡುಮಾರ್ನಾಡು ಯುವಕಮಂಡಲದ ಅಧ್ಯಕ್ಷ ರಮೇಶ್ ಶೆಟ್ಟಿ ಯುವಜನಮೇಳದ ಸಂಯೋಜಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ದ.ಕ ಜಿಲ್ಲಾ ಯುವಜನಸಬಲೀಕರಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಗೌಡ ವಂದಿಸಿದರು.