ತನ್ನ ವಿಮಾನ ಸಿಬ್ಬಂದಿಯ ಬಗ್ಗೆ ಪತ್ರಕರ್ತನೊಬ್ಬನ ಬರಹವೊಂದು ಏರ್ ಇಂಡಿಯಾಗೆ ತಲುಪಿ ಸಂಸ್ಥೆ ಆಕೆಯನ್ನು ಸನ್ಮಾನಿಸಿತು
ಏರ್ ಇಂಡಿಯಾ ಎಂದರೆ ವಿಳಂಬ, ಕೆಟ್ಟ ಸೇವೆ, ಸರಕಾರೀ ಕಚೇರಿಯ ಹಾಗೆ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಏರ್ ಇಂಡಿಯಾದಲ್ಲಿ ಇತ್ತೀಚಿಗೆ ಮುಂಬೈ ಯಿಂದ ತಿರುವನಂತಪುರಮ್ ಗೆ ಪ್ರಯಾಣಿಸಿದ ಪತ್ರಕರ್ತ ಅನಂತ್ ರಂಗಸ್ವಾಮಿ ಅವರು ವಿಮಾನದ ಸಿಬ್ಬಂದಿಗಳ ಮುಖ್ಯಸ್ಥೆಯ ಮಾನವೀಯ ಸೇವೆಯನ್ನು ನೋಡಿ ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿದ್ದರು. ಅದು ಏರ್ ಇಂಡಿಯಾದ ಗಮನಕ್ಕೆ ಬಂದು ಸಂಸ್ಥೆ ಆಕೆಯನ್ನು ಸನ್ಮಾನಿಸಿತು. ಒಂದು ಸಿಬ್ಬಂದಿಯಿಂದ ಇಡೀ ಸಂಸ್ಥೆಯ ಇಮೇಜನ್ನು ಹೇಗೆ ಬದಲಾಯಿಸುತ್ತೆ ನೋಡಿ.
ಅನಂತ್ ರ ಬರಹವನ್ನೊಮ್ಮೆ ಓದಿ :
ಇದು ಮಾರ್ಚ್ 4 ರಂದು ಮುಂಬೈ ನಿಂದ ತಿರುವನಂತಪುರಮ್ ಗೆ ಬಂದ ಏರ್ ಇಂಡಿಯಾ 667 ವಿಮಾನದ ಕ್ಯಾಬಿನ್ ಸಿಬ್ಬಂದಿಯ ಮುಖ್ಯಸ್ಥೆ ಎ. ಸಿಂಗ್ ಎಂಬ ಮಹಿಳೆಯ ಕುರಿತ ಮನಮುಟ್ಟುವ ಕತೆ. ಎಂದಿನಂತೆ ವಿಮಾನ ತಡವಾಗಿ ಹೊರಟಿತ್ತು. ನನಗೆ ಒಂದೆರಡು ಗಂಟೆಗಳ ಬಳಿಕ ಹೊರಡಲಿದ್ದ ಇಂಡಿಗೋದಲ್ಲಿಯೇ ಹೋಗಬಹುದಿತ್ತು ಎಂದು ಅನಿಸಿತ್ತು.
ಕೊನೆಗೂ ನಾವು ವಿಮಾನದ ಒಳಗೆ ಹೋದೆವು. ನನ್ನ ಹತ್ತಿರ ಯಾವುದೇ ಬ್ಯಾಗ್ ಇರಲಿಲ್ಲ ಹಾಗು ನನ್ನದು 8ಡಿ ಸೀಟ್ ಆದ್ದರಿಂದ ನಾನು ಕೊನೆಗೆ ಹೋದೆ. ನನ್ನ ಸೀಟಿನಲ್ಲಿ ಆಸೀನನಾಗುವ ಮೊದಲು ನನ್ನ ಹಿಂದೆ ಮುಂದೆ ಕುಳಿತಿದ್ದವರನ್ನು ಒಮ್ಮೆ ನೋಡಿದೆ. ನನ್ನ ಹಿಂದಿನ 7ನೆ ಸಾಲಿನ ನಾಲ್ಕು ಸೀಟುಗಳಲ್ಲಿ ಒಂದು ಕುಟುಂಬ ಕುಳಿತಿತ್ತು. ಕಿಟಕಿ ಬಳಿ ಸುಮಾರು ಐದು ವರ್ಷದ ಹೆಣ್ಣು ಮಗು , ಅವಳ ಪಕ್ಕದಲ್ಲಿ ಅವಳ ತಾಯಿ , ಆಕೆಯ ಪಕ್ಕದಲ್ಲಿ ಸುಮಾರು 10 ವರ್ಷದ ಹುಡುಗ. ನೋಡುವಾಗಲೆ ಆತ ಮಾನಸಿಕವಾಗಿ ಅಸ್ವಸ್ಥ ಎಂದು ಗೊತ್ತಾಗುತ್ತಿತ್ತು. ಆತನ ಪಕ್ಕದಲ್ಲಿ ಆತನ ತಂದೆ ಇದ್ದರು.
ವಿಮಾನ ಹೊರಟಿತು. ಹುಡುಗ ಆಗಾಗ ಬೊಬ್ಬೆ ಹಾಕುತ್ತಿದ್ದ. ಕೂಡಲೇ ಅವನ ತಂದೆ ತಾಯಿ ಅವನನ್ನು ಸಮಾಧಾನ ಮಾಡುತ್ತಿದ್ದರು. ಊಟ ಮಾಡುವ ಹೊತ್ತಾಯಿತು. ಕ್ಯಾಬಿನ್ ಸಿಬ್ಬಂದಿಯ ಮುಖ್ಯಸ್ಥೆ ಎ. ಸಿಂಗ್ ( ನಾನು ವಿಮಾನದಿಂದ ಕೆಳಗಿಳಿಯುವಾಗ ಆಕೆಯ ಹೆಸರು ನೋಡಿದೆ) ಈ ಕುಟುಂಬಕ್ಕೆ ಊಟದ ಪೋತ್ತನಗಳಿದ್ದ ಟ್ರೇ ನೀಡಿದರು. ಹುಡುಗನ ಊಟದ ಅಲ್ಯುಮಿನಿಯಂ ಫಾಯಿಲ್ ಅನ್ನು ಅವನ ತಾಯಿ ತೆರೆಯುವಷ್ಟರಲ್ಲಿ, ಹುಡುಗ ಇಡೀ ಟ್ರೇ ಯನ್ನು ತೆಗೆದು ಬಿಸಾಡಿಬಿಟ್ಟ. ಬಿಸಿ ಬಿಸಿ ಅಣ್ಣ ಇಡೀ ವಿಮಾನದ ನೆಲದಲ್ಲಿ ಹರಡಿತು.
ತಕ್ಷಣ ಸಿಂಗ್ ಹುಡುಗನ ಕಡೆ ಧಾವಿಸಿ ಬಂದರು. ಆತನಿಗೇನೂ ತೊಂದರೆ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರು. ಅವನಿಗೆ ಸಮಾಧಾನ ಹೇಳಿದರು. ಉಳಿದವರಿಗೆ ಊಟ ಹಂಚುವುದನ್ನು ಮುಂದುವರಿಸಿ ಎಂದು ತನ್ನ ಸಹೋದ್ಯೋಗಿಗಳಿಗೆ ಹೇಳಿದರು. ಇನ್ನೊಂದು ಊಟದ ಪೊಟ್ಟಣ ತಂದು ಹುಡುಗನಿಗೆ ಕೊಟ್ಟರು. ಅವನ ತಂದೆ ತಾಯಿಯ ಕಣ್ಣಲ್ಲಿ ಕೃತಜ್ಞತೆಯ ಭಾವ ಎದ್ದು ಕಾಣುತ್ತಿತ್ತು. ಅನಂತರ ಸುಮಾರು 40 ರ ಹರೆಯದ ಸಿಂಗ್ ಆಟ ಚೆಲ್ಲಿದ್ದ ಎಲ್ಲ ಅನ್ನವನ್ನು ಕೇವಲ ನ್ಯಾಪ್ಕಿನ್ ಬಳಸಿ ಒಬ್ಬರೇ ಸಾವಧಾನವಾಗಿ ತೆಗೆದು ನೆಲವನ್ನು ಸ್ವಚ್ಚಗೊಳಿಸಿದರು.
ಅನಂತರ ತಮ್ಮ ಇತರ ಕೆಲಸದ ಕಡೆ ಗಮನ ಹರಿಸಿದರು ಎ. ಸಿಂಗ್. ಆಗಾಗ ಬಂದು ಹುಡುಗನ ಯೋಗಕ್ಷೇಮ ವಿಚಾರಿಸುವುದನ್ನು ಆಕೆ ಮರೆಯಲಿಲ್ಲ.
ವಿಮಾನದಿಂದ ಇಳಿಯುವಾಗ ಎ. ಸಿಂಗ್ ಬಳಿ ಹೋಗಿ ಆಕೆ ಮಾಡಿದ್ದು ಫೆಂಟಾಸ್ಟಿಕ್ ಕೆಲಸ ಎಂದು ಹೇಳಿದೆ. ಅದಕ್ಕೆ ಆಕೆ ಏನು ಹೇಳಿದರು ಗೊತ್ತೇ ? " ನಾನು ಮಾಡಿದ್ದು ಏನೂ ಅಲ್ಲ. ಆ ಹುಡುಗ ಏನು ಅನುಭವಿಸುತ್ತಿರಬಹುದು ಎಂದು ಊಹಿಸಿ ".
ನಾನ್ಯಾಕೆ ಇದನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ ? ಯಾಕೆಂದರೆ ಎ. ಸಿಂಗ್ ಅವರ ಸೇವೆಯನ್ನು ಪ್ರಯಾಣಿಕರು ಗುರುತಿಸಿದ್ದಾರೆ ಎಂದು ಆಕೆಗೆ ಗೊತ್ತಾಗಬೇಕಿದೆ. ಯಾರಾದರೂ ಏರ್ ಇಂಡಿಯಾದಲ್ಲಿ ಆಕೆಯನ್ನು ಗೊತ್ತಿರುವ ಯಾರಿಗಾದರೂ ಈ ಸಂದೇಶ ತಲುಪಿಸುವಿರಾ ?