×
Ad

ಬೇಡಿಕೆಗಳ ಈಡೇರಿಕೆಗೆೆ ಆಗ್ರಹಿಸಿ ಕಾರ್ಮಿಕರ ಧರಣಿ

Update: 2016-03-10 23:27 IST

ಉಡುಪಿ, ಮಾ.10: ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಧರಣಿ ನಡೆಸಲಾಯಿತು.
ಧರಣಿ ನಿರತರನ್ನುದ್ದೇಶಿಸಿ ಸಮಿತಿಯ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ಮುಖಂಡ ವಿಶ್ವನಾಥ ರೈ, ಎಐಟಿಯುಸಿ ನಾಯಕ ಬಿ.ಶೇಖರ್, ವಿಮಾ ನೌಕರರ ಸಂಘದ ಯು.ಗುರುದತ್ ಮಾತನಾಡಿದರು. ಈ ಕುರಿತ ಮನವಿಯನ್ನು ಉಡುಪಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು.
12 ಬೇಡಿಕೆಗಳು:

ಕಾರ್ಮಿಕರ ಹಿತಕ್ಕೆ ಮಾರಕವಾದ ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ಕೈಬಿಡಬೇಕು. ವಾಣಿಜ್ಯ ಉದ್ದೇಶಗಳಿಗಾಗಿ ಕಲ್ಲಿದ್ದಲು ನಿಕ್ಷೇಪ ಹರಾಜಿಗೆ ಅನುಕೂಲವಾಗುವ ಸುಗ್ರೀವಾಜ್ಞೆ ಹಾಗೂ ಕೋಲ್ ಇಂಡಿಯಾದ ಷೇರು ಮಾರಾಟವನ್ನು ನಿಲ್ಲಿಸಬೇಕು. ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.49ಕ್ಕೆ ಏರಿಸುವ ಕಾಯ್ದೆಯನ್ನು ಹಿಂಪಡೆಯಬೇಕು. ರಾಜಸ್ತಾನ ಶಾಸನ ಸಭೆ ಅಂಗೀಕರಿಸಿರುವ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯಬೇಕು. 18 ಸಾವಿರ ರೂ. ಸಮಾನ ಕನಿಷ್ಠ ವೇತನ ನಿಗಡಿಪಡಿಸಬೇಕು. ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು. 3,000 ರೂ. ಕನಿಷ್ಠ ಪಿಂಚಣಿಗಾಗಿ, ಬೋನಸ್, ಭವಿಷ್ಯನಿಧಿ ಉಪಧನ ಕಾಯ್ದೆಗಳಲ್ಲಿನ ಮಿತಿಗಳನ್ನು ಹೆಚ್ಚಳ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ನಿಲ್ಲಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗಳ ಜಾರಿಗೆ ಸಮರ್ಪಕ ಹಣ ಮೀಸಲಿಡಬೇಕು. ಬೆಲೆ ನಿಯಂತ್ರಣಕ್ಕಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿಯಾಗಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. 45 ದಿನಗಳಲ್ಲಿ ಸಂಘದ ನೋಂದಣಿ ಮತ್ತು ಸಾಮೂಹಿಕ ಚೌಕಾಸಿ ಹಕ್ಕಿನ ರಕ್ಷಣೆಗಾಗಿ ಐಎಲ್‌ಒದ 87ನೆ ಮತ್ತು 98ನೆ ನಿರ್ಣಯಗಳನ್ನು ಸಂಸತ್‌ನಲ್ಲಿ ಅಂಗೀಕರಿಸಬೇಕು.
ಧರಣಿಯಲ್ಲಿ ಎಐಟಿಯುಸಿಯ ಕೆ.ವಿ.ಭಟ್, ಬಿಎಸ್ಸೆನ್ನೆಲ್ ನೌಕರರ ಸಂಘದ ಯು.ಶಶಿಧರ್ ಗೊಲ್ಲ, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾದ ರವೀಂದ್ರ, ವಿಮಾ ನೌಕರರ ಸಂಘದ ಉಷಾಲತಾ ಶೆಟ್ಟಿ, ನಿರ್ಮಲಾ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರಿನಲ್ಲೂ ಕಾರ್ಮಿಕರಿಂದ ಧರಣಿ
ದೇಶದ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ದ.ಕ. ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ರಾಷ್ಟ್ರವ್ಯಾಪಿ 18,000 ರೂ. ಸಮಾನ ಕನಿಷ್ಠ ವೇತನ ಜಾರಿಯಾಗಬೇಕು. ಕನಿಷ್ಠ ಪಿಂಚಣಿ 3,000 ರೂ. ನಿಗದಿಯಾಗಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿಯನ್ನು ಸ್ಥಾಪಿಸಬೇಕು ಮೊದಲಾದ 12 ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಎಐಟಿಯುಸಿ ಜಿಲ್ಲಾಧ್ಯಕ್ಷ ಸೀತಾರಾಂ ಬೇರಿಂಜ, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್, ಉಪಾಧ್ಯಕ್ಷ ವಿ.ಕುಕ್ಯಾನ್, ಬಿಎಸ್ಸೆನ್ನೆಲ್‌ಇಯು ರಾಜ್ಯ ಕಾರ್ಯದರ್ಶಿ ಬಿ.ಪಿ.ನಾರಾಯಣ, ಜಿಲ್ಲಾಧ್ಯಕ್ಷ ಯು.ಕೃಷ್ಣ, ಕಾರ್ಯದರ್ಶಿ ಬಾಷಾ, ಬ್ಯಾಂಕ್ ಎಂಪಾಯೀಸ್ ಫೆಡರೇಶನ್ ಆಫ್ ಇಂಡಿಯಾದ ಪುರುಷೋತ್ತಮ, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News