×
Ad

ಮನಪಾ 18ನೆ ಮೇಯರ್ ಆಗಿ ಹರಿನಾಥ್ ಉಪ ಮೇಯರ್ ಆಗಿ ಸುಮಿತ್ರ ಕರಿಯಾ ಅವಿರೋಧ ಆಯ್ಕೆ

Update: 2016-03-11 15:40 IST

ಮಂಗಳೂರು, ಮಾ.11: ಮಹಾನಗರ ಪಾಲಿಕೆಯ 18ನೆ ಅವಧಿಯ ಮೇಯರ್ ಆಗಿ ನಿರೀಕ್ಷೆಯಂತೆ ಕಾಂಗ್ರೆಸ್‌ನ ಹರಿನಾಥ್ ಆಯ್ಕೆಯಾದರೆ, ಉಪ ಮೇಯರ್ ಆಗಿ ಬಿಜೆಪಿಯ ಸುಮಿತ್ರಾ ಕರಿಯಾ ಅವಿರೋಧವಾಗಿ ಆಯ್ಕೆಯಾದರು. ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೈಸೂರು ಉಪ ವಿಭಾಗದ ಪ್ರಾದೇಶಿಕ ಆಯುಕ್ತ ಎ.ಎಂ. ಕುಂಞಬ್ಬು ಚುನಾವಣಾಧಿಕಾರಿಯಾಗಿ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಇದೇ ವೇಳೆ ತೆರಿಗೆ ಹಣಕಾಸು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ- ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ಲೆಕ್ಕಪತ್ರ ನ್ಯಾಯ ಸಮಿತಿಗೆ ತಲಾ ಏಳು ಸದಸ್ಯರ ಆಯ್ಕೆಯೂ ನಡೆಯಿತು.

ನೂತನವಾಗಿ ಆಯ್ಕೆಯಾದ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರವಾಧಿಯು 11-3-2016ರಿಂದ 10- 3- 2017ರವರೆಗೆ ಮುಂದುವರಿಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಇಂದು ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತರಗಳು ಹಾಗೂ ಉಪ ಮೇಯರ್ ಸ್ಥಾನಕ್ಕೆ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿತ್ತು. ಬೆಳಗ್ಗೆ 11.30ಕ್ಕೆ ಸರಿಯಾಗಿ ಪಾಲಿಕೆ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಪ್ರಾದೇಶಿಕ ಆಯುಕ್ತ ಕುಂಞಬ್ಬು, ಆರಂಭದಲ್ಲಿ ಸದನದಲ್ಲಿ ಹಾಜರಿದ್ದ ಸದಸ್ಯರ ಹಾಜರಾತಿಯನ್ನು ದೃಢೀಕರಿಸಿಕೊಂಡರು. ಬಳಿಕ ಮೇಯರ್ ಸ್ಥಾನಕ್ಕೆ ಪರ ಹಾಗೂ ವಿರೋಧವಾಗಿ ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ಹರಿನಾಥ್ ಪರ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಕಾಂಗ್ರೆಸ್‌ನ 35 ಸದಸ್ಯರು ಸೇರಿ ಒಟ್ಟು 36 ಮಂದಿ ಮತ ಚಲಾಯಿಸಿದರು.

ವಿರೋಧವಾಗಿ ಬಿಜೆಪಿಯ 20 ಮಂದಿ ಮತ ಚಲಾಯಿಸಿದರು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾ ಡಿ. ಬಂಗೇರ ಪರ 20 ಮತಗಳು ಚಲಾವಣೆಯಾಯಿತು. ಮನಪಾವು ಕಾಂಗ್ರೆಸ್ ಸದಸ್ಯರ ಪ್ರಾಬಲ್ಯದಿಂದ ಕೂಡಿದ್ದರೂ ಮೀಸಲಾತಿಯ ಹಿನ್ನೆಲೆಯಲ್ಲಿ ಮನಪಾದಲ್ಲಿ ಪರಿಶಿಷ್ಟ ಪಂಗಡದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದ ಬಿಜೆಪಿಯ ಸುಮಿತ್ರಾ ಕರಿಯಾರಿಂದ ಉಪ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಕೆಯಾಗಿತ್ತು. ಏಕೈಕ ನಾಮಪತ್ರದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯವರು ಸುಮಿತ್ರಾ ಕರಿಯಾರನ್ನು ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿ ಪ್ರಕಟಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆಯುಕ್ತರಾದ ಕೆ.ಎನ್. ಗಾಯತ್ರಿ, ಮನಪಾ ಆಯುಕ್ತ ಡಾ. ಗೋಪಾಲಕೃಷ್ಣ ಭಾಗವಹಿಸಿದ್ದರು. ಸ್ಥಾಯಿ ಸಮಿತಿಸದಸ್ಯರು

* ತೆರಿಗೆ ಹಣಕಾಸು ಅಪೀಲು ಸ್ಥಾಯಿ ಸಮಿತಿಗೆ ಶೈಲಜಾ, ಅಪ್ಪಿ, ಸುರೇಂದ್ರ, ನವೀನ್‌ಚಂದ್ರ ಕೆ., ಪ್ರವೀಣ್ ಚಂದ್ರ ಆಳ್ವ, ಸುಮಯ್ಯಿ, ಪ್ರತಿಭಾ ಕುಳಾಯಿ ಆಯ್ಕೆಯಾಗಿದ್ದಾರೆ. * ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಲತಾ ಸಾಲ್ಯಾನ್, ರಜನೀಶ್, ನಾಗವೇಣಿ, ಪ್ರೇಮಾನಂದ ಶೆಟ್ಟಿ, ರಾಜೇಶ್, ದೀಪಕ್ ಪೂಜಾರಿ, ಕವಿತಾ ಸನಿಲ್ ಆಯ್ಕೆಯಾಗಿದ್ದಾರೆ. * ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಲಾನ್ಸ್ ಲೋಟ್ ಪಿಂಟೋ, ಅಶೋಕ್ ಶೆಟ್ಟಿ, ರತಿಕಲಾ, ವಿಜಯ ಕುಮಾರ್, ಕೆ. ಮಧುಕಿರಣ್, ನವೀನ್ ಆರ್. ಡಿಸೋಜಾ, ಪುರುಷೋತ್ತಮ ಚಿತ್ರಾಪುರ ಆಯ್ಕೆಯಾದರು. * ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಪೂರ್ಣಿಮಾ, ರಘುವೀರ್, ಜುಬೇದಾ, ಪ್ರಕಾಶ್, ಅಖಿಲಾ ಆಳ್ವ, ಕವಿತಾ, ಬಶೀರ್ ಅಹ್ಮದ್ ಆಯ್ಕೆಯಾಗಿದ್ದಾರೆ.

ತಟಸ್ಥರಾಗುಳಿದ ಐವರು ಸದಸ್ಯರು!

60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 35 ಕಾಂಗ್ರೆಸ್, 20 ಬಿಜೆಪಿ ಹಾಗೂ, 2 ಜೆಡಿಎಸ್, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಂದು ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಜೆಡಿಎಸ್, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರದ ಐದು ಮಂದಿ ಸದಸ್ಯರು ತಟಸ್ಥರಾಗಿ ಉಳಿಯುವ ಮೂಲಕ ಗಮನ ಸೆಳೆದರು.

ಮನಪಾದ ಅನುಭವಿ, ಹಿರಿಯ ಸದಸ್ಯ ಹರಿನಾಥ್

1984ರಿಂದ ಪ್ರಸ್ತುತ ಮನಪಾದ ಹಿರಿಯ ಹಾಗೂ ಅನುಭವಿ ಸದಸ್ಯರಲ್ಲಿ ಓರ್ವವಾಗಿರುವ ಹರಿನಾಥ್, 6 ಬಾರಿ ಮನಪಾ ಚುನಾವಣೆಗೆ ಸ್ಪರ್ಧಿಸಿ 5 ಬಾರಿ ಆಯ್ಕೆಯಾಗಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 10ನೆ ತರಗತಿವರೆಗೆ ಓದಿರುವ ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದುಕೊಂಡು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ನೇರ ನಡೆ ನುಡಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಹರಿನಾಥ್‌ರವರು 2014ರಲ್ಲಿಯೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ವರಿಷ್ಠರಿಂದ ಅಭ್ಯರ್ಥಿ ಆಯ್ಕೆಯ ಹಿನ್ನೆಲೆಯಲ್ಲಿ ಹರಿನಾಥ್ ಅವರಿಗೆ ಈ ಹಿಂದೆ ಮೇಯರ್ ಸ್ಥಾನ ಕೈತಪ್ಪಿ ಹೋಗಿತ್ತು.

ಕೊರಗ ಸಮುದಾಯಕ್ಕೆ ಒಲಿದ ಅದೃಷ್ಟ!

ಈ ಬಾರಿಯ ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಲಭ್ಯವಾಗಿದೆ. ಮನಪಾದಲ್ಲಿ ಪರಿಶಿಷ್ಟ ಪಂಗಡದ ಏಕೈಕ ಮಹಿಳೆಯಾಗಿದ್ದ ಸುಮಿತ್ರಾ ಕರಿಯಾ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮನಪಾದಲ್ಲಿ ಸಂಚಲನ ಮೂಡಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಉಪ ಮೇಯರ್ ಸ್ಥಾನವನ್ನು ಪಡೆದುಕೊಂಡಿರುವ 30 ಹರೆಯದ, ಪಿಯುಸಿ ವಿದ್ಯಾಭ್ಯಾಸ ಹೊಂದಿರುವ ಸುಮಿತ್ರಾ ಕರಿಯಾ ಕೊರಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಎಂಟು ವರ್ಷಗಳ ಹಿಂದೆ ರಾಜಕೀಯದಲ್ಲಿ ತನ್ನನ್ನು ತೊಡಗಿಸಿಕೊಂಡ ಸುಮಿತ್ರಾ ಕರಿಯಾ, ಈ ಹಿಂದೆ ಮನಪಾದಲ್ಲಿ ಬಿಜೆಪಿ ಆಡಳಿತಾವಧಿಯಿದ್ದ ಸಂದರ್ಭ ಆಯ್ಕೆಯಾದಾಗಿದ್ದ ವೇಳೆ ಅತಿ ಕಿರಿಯ ಸದಸ್ಯರಾಗಿ ಮನಪಾದಲ್ಲಿ ಗುರುತಿಸಿಕೊಂಡವರು. ಈ ಬಾರಿ ಉಪ ಮೇಯರ್ ಹುದ್ದೆ ತನ್ನ ಮಗಳನ್ನು ಹುಡುಕಿಕೊಂಡು ಬಂದಿದ್ದು, ಆಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕೆಂಬುದು ತಮ್ಮ ಅಪೇಕ್ಷೆ ಎಂದು ಸುಮಿತ್ರಾ ಕರಿಯ ತಂದೆ, ನಿವೃತ್ತ ಎನ್‌ಎಂಪಿಟಿ ನೌಕರ ಕರಿಯಾ ಅವರು ಸಂತಸ ವ್ಯಕ್ತಪಡಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News