ಸುಳ್ಯ: ಮಂಗಳೂರು ವಿವಿ ಅಂತರ್‌ಕಾಲೇಜು ಪುರುಷರ ಖೋಖೋ ಟೂರ್ನಿ ಆರಂಭ
ಸುಳ್ಯ: ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ಖೋ-ಖೋ ಪಂದ್ಯಾಟ ‘ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿ’ ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊಂಡಿದೆ. ಮಂಗಳೂರು ವಿಶ್ವ ವಿದ್ಯಾನಿಯಲದ ವಿವಿಧ ಕಾಲೇಜುಗಳ 12 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ. ವಿಶ್ವ ವಿದ್ಯಾನಿಯಲದ ಸಿಂಡಿಕೇಟ್ ಸದಸ್ಯ ಡಾ.ಸುಂದರ ನಾಯ್ಕಾ ಪಂದ್ಯಾಟ ಉದ್ಘಾಟಿಸಿದರು. ಜೀವನದಲ್ಲಿ ಏನನ್ನಾದರು ಸಾಧಿಸುವ ಕನಸನ್ನು ಕಾಣಬೇಕು. ಅದನ್ನು ನನಸು ಮಾಡಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಗುರಿ ತಲುಪುವ ಯೋಜನೆ ಹಾಕಿಕೊಳ್ಳಬೇಕು ಎಂದರು. ಪ್ರಿಲಿಮಿನರಿ ಹಾಗೂ ಚಾಂಪಿಯನ್ ಮಾದರಿಯಲ್ಲಿ ಪಂದ್ಯಾಟ ನಡೆಸುವುದರಿಂದ ಎಲ್ಲಾ ಕಾಲೇಜುಗಳೂ ಪಾಲ್ಗೊಳ್ಳಲು ಅವಕಾಶ ಆಗುತ್ತದೆ. ಇಂತಹ ನಿರ್ಧಾರ ತೆಗೆದುಕೊಂಡ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಅಭಿನಂದನೀಯ ಎಂದರು.
ಮಂಗಳೂರು ವಿವಿಯ ಇನ್ನೋರ್ವ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ ಮಾತನಾಡಿ, ಖೋಖೋ ಆಟ ಈಗ ಹಳ್ಳಿಗಳಲ್ಲಷ್ಟೇ ಉಳಿದಿದೆ. ಪಟ್ಟಣದ ಜನರೂ ಇದರಲ್ಲಿ ಆಸಕ್ತಿ ಬೆಳೆಸುವ ಕೆಲಸವನ್ನು ವಿಶ್ವ ವಿದ್ಯಾನಿಲಯಗಳು ಮಾಡಬೇಕು ಎಂದರಲ್ಲದೆ ಪಂದ್ಯಾಟ ನಡೆಸುವ ಕಾಲೇಜುಗಳಿಗೆ ಈಗ ನೀಡುವ ಅನುದಾನವನ್ನು ಹೆಚ್ಚಿಸಲು ಯತ್ನ ಮಾಡುವುದಾಗಿ ಹೇಳಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕಿಶೋರ್ ಮಾತನಾಡಿ, ಮುಂದಿನ ವರ್ಷದಿಂದ ಪಿಜಿ ಕೋರ್ಸ್‌ನಲ್ಲಿ ಕ್ರೀಡಾಪಟುಗಳಿಗೆ 1 ಸ್ಥಾನವನ್ನು ಮೀಸಲು ಇಡಲು ವಿಶ್ವ ವಿದ್ಯಾಲಯ ನಿರ್ಣಯ ಕೈಗೊಂಡಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಎಂದರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸಾಧನೆ, ಪ್ರಗತಿಗೆ ಶ್ರಮ ಪಡುವ ಅಗತ್ಯವಿದೆ. ಕೇವಲ ಓದುವುದರಿಂದ ಮಾತ್ರ ಏನೂ ಪ್ರಯೋಜನವಿಲ್ಲ. ಓದುವುದರ ಜೊತೆಗೆ ಕೀಡೆಯಲ್ಲೂ ತೊಡಗಿಸಿಕೊಂಡಾಗ ಪ್ರತಿಭೆ ಹೊರ ಹೊಮ್ಮಲು ಸಾಧ್ಯ. ಶಿಕ್ಷಣಕ್ಕೆ ನೀಡುವಷ್ಟೇ ಪ್ರೋತ್ಸಾಹವನ್ನು ಸರ್ಕಾರ ಕ್ರೀಡೆಗೂ ನೀಡಿದಲ್ಲಿ ದೇಶದ ಕ್ರೀಡಾಪಟುಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಬಹುದು ಎಂದರು. ವೆಂಕಟ್ರಮಣ ಸೊಸೈಟಿ ನಿರ್ದೇಶಕ ಸದಾನಂದ ಜಾಕೆ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ನೆಟ್ಟಾರು ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್ ಕೊಯಿಂಗಾಜೆ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಚ್ಚುತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.