ಮಂಗಳೂರು: ಕೋಸ್ಟ್ ಗಾರ್ಡ್‌ನಿಂದ ಅಳಿವಿನಂಚಿನಲ್ಲಿರುವ ಕಡಲಾಮೆಗಳ ರಕ್ಷಣೆ
ಮಂಗಳೂರು, ಮಾ.11: ಕರ್ನಾಟಕ ಕೋಸ್ಟ್ ಗಾರ್ಡ್ (ಕರಾವಳಿ ತಟ ರಕ್ಷಣಾ ಪಡೆ) ಸಿಬ್ಬಂದಿಗಲು ಅಳಿವಿನಂಚಿನಲ್ಲಿರುವ ಮೂರು ಕಡಲಾಮೆಗಳನ್ನು ರಕ್ಷಣೆ ಮಾಡಿದ್ದಾರೆ.
ಮಾರ್ಚ್ 10ರಂದು ಕಡಲ ಸುರಕ್ಷತೆ ಮತ್ತು ಗಸ್ತು ಕಾರ್ಯ ನಡೆಸುತ್ತಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗು (ಐಸಿಜಿಎಸ್) ಅಮಾರ್ತ್ಯದಲ್ಲಿದ್ದ ತಟ ರಕ್ಷಣಾ ಪಡೆಯ ಸಿಬ್ಬಂದಿಗಳು ಒಲಿವ್ ರೈಡ್ಲಿ ಹೆಸರಿನ ಕಡಲಾಮೆಗಳನ್ನು ರಕ್ಷಿಸಿದ್ದಾರೆ.
ಬೆಳಗ್ಗೆ 6.45ರ ಸುಮಾರಿಗೆ ಮಂಗಳೂರಿನಲ್ಲಿ ಗಸ್ತು ನಡೆಸುತ್ತಿದ್ದ ಅಮಾರ್ತ್ಯ ಹಡಗಿನಲ್ಲಿದ್ದ ಕರಾವಳಿ ತಟ ರಕ್ಷಣಾ ಪಡೆಯ ಸಿಬ್ಬಂದಿಗಳಿಗೆ ಸಮುದ್ರದ ನೀರಿನಲ್ಲಿ ತೇಲಾಡುತ್ತಿರುವ ಬಲೆಯೊಳಗೆ ಯಾವುದೋ ಜೀವಿ ಒದ್ದಾಡುತ್ತಿರುವುದನ್ನು ಕಂಡು ರಕ್ಷಣಾ ಕಾರ್ಯಕ್ಕೆ ಮುಂದಾದಾಗ ಅದು ಕಡಲಾಮೆಯೆಂಬುದು ಸಿಬ್ಬಂದಿಗಳಿಗೆ ಅರಿವಿಗೆ ಬಂದಿದೆ. ರಕ್ಷಣೆ ಮಾಡಲಾದ ಮೂರು ಕಡಲಾಮೆಗಳನ್ನು ಆ ಸ್ಥಳದಿಂದ ಸಮುದ್ರದಲ್ಲಿನನ ಅವುಗಳ ಸುರಕ್ಷಿತ ತಾಣಗಳಲ್ಲಿ ಬಿಡಲಾಗಿದೆ.
ಕಡಲ ರಕ್ಷಣೆ ಕಾಯಿದೆಯಡಿ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವ ಜತೆಗೆ ಕರಾವಳಿ ತಟ ರಕ್ಷಣಾ ಪಡೆಯು ಸಮುದ್ರದಲ್ಲಿ ಅಳಿವಿನಂಚಿಲ್ಲಿರುವ ಜಲಚರಗಳಾದ ವೇಲ್ ಶಾರ್ಕ್, ಡಗಾಂಗ್, ಡಾಲ್ಫಿನ್ ಹಾಗೂ ಕಡಲಾಮೆ ಮೊದಲಾದವುಗಳ ರಕ್ಷಣಾ ಕಾರ್ಯವನ್ನೂ ನಡೆಸುತ್ತಿರುತ್ತದೆ ಎಂದು ಕರ್ನಾಟಕ ಕರಾವಳಿ ತಟರಕ್ಷಣಾ ಪಡೆಯ ಪ್ರಕಟನೆ ತಿಳಿಸಿದೆ.