ಮೂಡುಬಿದಿರೆ: ಅನಧಿಕೃತ ವ್ಯಾಪಾರ, ಪುರಸಭಾಧಿಕಾರಿಗಳಿಂದ ತೆರವು
ಮೂಡುಬಿದಿರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಪೇಟೆಯ ರಸ್ತೆಯ ಬಳಿಯಲ್ಲಿ ತಲೆ ಎತ್ತಿರುವ ಅನಧಿಕೃತ ವ್ಯಾಪಾರಕ್ಕೆ ಪುರಸಭೆ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿದರು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅನಧಿಕೃತ ವ್ಯಾಪಾರ, ವ್ಯಾಪಾರಸ್ಥರ ಬಗ್ಗೆ ಪುರಸಭೆಗೆ ದೂರುಗಳಿದ್ದು ಇದರ ಬಗ್ಗೆ ಪುರಸಭೆಯ ಕಳೆದ ಮಾಸಿಕ ಸಭೆಯಲ್ಲಿ ಚರ್ಚೆಗೆ ಬಂದಿದ್ದು ಮಿಶ್ರ ಅಭಿಪ್ರಾಯಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಶೀನ ನಾಯ್ಕಾ ನೇತ್ರತ್ವದ ಪುರಸಭೆ ಅಧಿಕಾರಿಗಳ ತಂಡ ವಿದ್ಯಾಗಿರಿ ಬಳಿಯಿಂದ ಹಳೆ ಬಸ್‌ನಿಲ್ದಾಣ, ಮೆಸ್ಕಾಂ ರಸ್ತೆ, ಅಲಂಗಾರು ಇನ್ನಿತರ ಪ್ರದೇಶಗಳಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರೆ ಇನ್ನು ಕೆಲವು ಅಂಗಡಿಗಳ ಸ್ವತ್ತುಗಳನ್ನು ಅಧಿಕಾರಿಗಳು ಸೀರ್ ಮಾಡಿರುತ್ತಾರೆ. ಅಲ್ಲದೆ ವಾರದ ಸಂತೆಯ ದಿನವಾಗಿರುವುದರಿಂದ ರಸ್ತೆ ಬದಿಯಲ್ಲಿ ಹಣ್ಣು ಹಂಪಲು, ತರಕಾರಿ, ಹೂವಿನ ಅಂಗಡಿ, ಗೂಡಂಗಡಿ, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಪುರಸಭೆಯ ದಿಢೀರ್ ಕಾರ್ಯಾಚರಣೆಯಿಂದ ಸಾಕಷ್ಟು ನಷ್ಟ ಅನುಭವಿಸಿದರೆನ್ನಲಾಗಿದೆ.
ಗುರುತಿನ ಚೀಟಿ ಇದ್ದರೂ ತೆರವು: ಅಲ್ಲದೆ ಬೀದಿ ಬದಿ ವ್ಯಾಪಾರಗಳ ಗುರುತಿನ ಚೀಟಿಯನ್ನು ಹೊಂದಿರುವ, ಹೊಟೇಲೊಂದರ ಬಳಿಯಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಪೇಪರ್ ಏಜೆಂಟ್ ಪ್ರಭಾಕರ ಮತ್ತು ಅಲ್ಲೇ ಪಕ್ಕದಲ್ಲಿ ಬೀಡಾ ವ್ಯಾಪಾರ ಮಾಡುತ್ತಿದ್ದ ಅವರ ವಿಶ್ವನಾಥ್ ಅವರ ಗೂಡುಗಳನ್ನು ತೆರವು ಮಾಡಲಾಗಿದೆ. ಮರುದಿನದ ಪೇಪರ್‌ನ್ನು ಯಾವ ರೀತಿಯಾಗಿ ಮಾರಾಟ ಮಾಡುವುದೆಂದು ತಿಳಿಯುತ್ತಿಲ್ಲವೆಂದು ಪೇಪರ್ ಏಜೆಂಟ್ ಪ್ರಭಾಕರ್ ಅವರು ಅಸಹಾಯಕತೆಯನ್ನು ಪತ್ರಿಕೆಯ ಜತೆ ವ್ಯಕ್ತಪಡಿಸಿದ್ದಾರೆ.