ಮಂಗಳೂರು: ಪತ್ನಿಯ ಆತ್ಮಹತ್ಯೆ, ಪತಿಗೆ ಕಠಿಣ ಸಜೆ
ಮಂಗಳೂರು, ಮಾ. 10: ಪತ್ನಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಶಿಕ್ಷೆ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣವಾದ ಪತಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಬಾಗಲಕೋಟೆಯ ಶಿರಗುಪ್ಪದ ಬೆನ್ನೂರು ನಿವಾಸಿ, ಪ್ರಸ್ತುತ ನಗರದ ಮಾಲೆಮಾರ್‌ನಲ್ಲಿ ವಾಸವಾಗಿರುವ ಸಾಬಣ್ಣ ಛಲವಾದಿ (33) ಶಿಕ್ಷೆಗೊಳಗಾದ ಅಪರಾಧಿ.ಆರೋಪಿಗೆ ಐಪಿಸಿ ಸೆಕ್ಷನ್ 306ರ ಪ್ರಕಾರ ನಾಲ್ಕು ವರ್ಷ ಕಠಿಣ ಜೈಲು ಶಿಕ್ಷೆ 10,000 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಮತ್ತೆ ಹೆಚ್ಚುವರಿ ಒಂದು ವರ್ಷದ ಕಠಿಣ ಜೈಲುವಾಸ ಅನುಭವಿಸಲು ಕೋರ್ಟ್ ಸೂಚಿಸಿದೆ. ಐಪಿಸಿ 504ರ ಪ್ರಕಾರ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ. ತಪ್ಪಿದ್ದಲ್ಲಿ ಹೆಚ್ಚುವರಿ ನಾಲ್ಕು ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶೆ ಉಮಾ ಎಂ.ಜೆ. ತೀರ್ಪು ನೀಡಿದ್ದಾರೆ.ಸಾಬಣ್ಣ ಛಲವಾದಿ ತನ್ನದೇ ಊರಿನ ಪುಷ್ಪಾ ಎಂಬಾಕೆಯನ್ನು ಶಿರಗುಪ್ಪದಲ್ಲಿ ವಿವಾಹವಾಗಿದ್ದ. ಅಲ್ಲಿಂದ ನೌಕರಿಗಾಗಿ ಮಂಗಳೂರಿಗೆ ಬಂದು ಮಾಲೆಮಾರಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಪತ್ನಿಯೊಂದಿಗೆ ವಾಸವಾಗಿದ್ದ. ಆಕೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅನೈತಿಕ ಸಂಬಂಧವಿರಿಸಿಕೊಂಡಿದ್ದಾಳೆಂದು ಆರೋಪಿಸಿ ಪದೇ ಪದೇ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ಮಾರ್ಚ್ 2ರಂದು ಆತ ಹಲ್ಲೆ ಮಾಡಿದ್ದ. ಆದರೆ, ಪತಿಯ ವರ್ತನೆಯಿಂದ ಬೇಸತ್ತ ಪುಷ್ಪಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ಪುಷ್ಪಾ ಪರವಾಗಿ ವಾದ ಮಂಡಿಸಿದ್ದರು.