ಆಳ್ವಾಸ್‌ನಲ್ಲಿ ಮೀಡಿಯಾ ಬಝ್ ಉತ್ಸವ ಉದ್ಘಾಟನೆ
ಮೂಡುಬಿದಿರೆ, ಮಾ.11: ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಮೂರನೆ ವರ್ಷದ ಮೀಡಿಯಾ ಬಝ್ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.ಉತ್ಸವಕ್ಕೆ ಚಾಲನೆ ನೀಡಿದ ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ವಹೀದಾ ಸುಲ್ತಾನ, ಮಾಧ್ಯಮಗಳಲ್ಲಿ ಮೂಡಿಬರುವ ತನಿಖಾ ವರದಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಘಾತುಕ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿದೆ. ಆದರೆ ಪತ್ರಿಕೋದ್ಯಮ ಪಠ್ಯ ವಿಷಯದಲ್ಲಿ ತನಿಖಾ ವರದಿ ಬಗ್ಗೆ ಸವಿವರವಾದ ಮಾಹಿತಿಗಳಿಲ್ಲ. ತನಿಖಾ ವರದಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಪ್ರತ್ಯೇಕ ವಿಷಯವಾಗಿಸುವ ಆವಶ್ಯಕತೆಯಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಾಧ್ಯಮ ಸಮಾಜಮುಖಿಯಾಗಿರಬೇಕು. ತಂತ್ರಜ್ಞಾನದ ವಿಪರೀತ ಬಳಕೆ ಸಮಾಜದಲ್ಲಿ, ಮಾನವೀಯ ಸಂಬಂಧದಲ್ಲಿ ಬಿರುಕು ಮೂಡಿ ಸ ಬಾರದು. ಸತ್ಯದ ಅನ್ವೇಷಣೆಯಲ್ಲಿ ಜಾಗರೂಕರಾಗಿಬೇಕು ಎಂದರು. ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ‘ಆಳ್ವಾಸ್ ಮಾಧ್ಯಮ’, ಭಿತ್ತಿಪತ್ರಿಕೆ ‘ಸುದ್ದಿಮನೆ’ ಹಾಗೂ ವಿದ್ಯಾರ್ಥಿ ನಿರಂಜನ ಕಡ್ಲಾರು ಸಂಪಾದಕತ್ವದ ‘ಹೊಂಗನಸು’ ಪಾಕ್ಷಿಕ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್, ಆಳ್ವಾಸ್ ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ವೌಲ್ಯಾ ಜೀವನ್‌ರಾಮ್ ಉಪಸ್ಥಿತರಿದ್ದರು. ಜಿಶ್ನು ವಂದಿಸಿದರು. ನಿಧಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.