×
Ad

ಮನಪಾ ಒಳಚರಂಡಿ ಪುನರ್‌ನಿರ್ಮಾಣ: ಮೇಯರ್ ಹರಿನಾಥ್

Update: 2016-03-11 23:38 IST

ಮಂಗಳೂರು, ಮಾ.11: ಜನರ ನಿರೀಕ್ಷೆ, ಬೇಡಿಕೆ ಗಳಿಗೆ ತಕ್ಕುದಾಗಿ ಕಾರ್ಯ ನಿರ್ವಹಿಸಲು ಬದ್ಧವಾಗಿದ್ದೇನೆ. ನಗರದ ಒಳಚರಂಡಿ ವ್ಯವಸ್ಥೆಯನ್ನು ಪುನರ್‌ನಿರ್ಮಿಸುವ ನಿಟ್ಟಿನಲ್ಲಿ ಹಳೆಯ ಪೈಪ್‌ಲೈನ್‌ಗಳನ್ನು ತೆಗೆದು ಹೊಸತನ್ನು ಅಳವಡಿಸುವ ಕಾರ್ಯವನ್ನು ಮಾಡು ವುದಾಗಿ ನೂತನ ಮೇಯರ್ ಹರಿನಾಥ್ ಭರವಸೆ ನೀಡಿದ್ದಾರೆ.

ನೂತನ ಮೇಯರ್ ಆಗಿ ಇಂದು ಆಯ್ಕೆಯಾದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಜನತೆಯ ನಿರೀಕ್ಷೆ ಬಹಳಷ್ಟಿದ್ದು, ಎಲ್ಲ ನಿರೀಕ್ಷೆಗಳೆಲ್ಲವನ್ನೂ ಪೂರೈಸಲು ಸಾಧ್ಯವಾಗದಿದ್ದರೂ ಜನರಿಗೆ ನ್ಯಾಯ, ಸಮಸ್ಯೆಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ಉಚಿತ ಆ್ಯಂಬುಲೆನ್ಸ್ ಸೇವೆ: ನಗರದಲ್ಲಿ ಶೀಘ್ರವೇ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಆರಂಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಖಾಸಗಿ ವಾಹನದ ಮೂಲಕ ಈ ಸೇವೆ ಆರಂಭಗೊಳ್ಳಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಮೇಯರ್ ತಿಳಿಸಿದರು. ಮಾರುಕಟ್ಟೆಗಳ ನಿರ್ಮಾಣಕ್ಕೆ ಆದ್ಯತೆ: ನಗರದಲ್ಲಿ ಮಂಗಳೂರು ಸೆಂಟ್ರಲ್, ಕಾವೂರು, ಕಂಕನಾಡಿ, ಸುರತ್ಕಲ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಆದ್ಯತೆ ನೆಲೆಯಲ್ಲಿ ಕೈಗೊಳ್ಳಲಾಗುವುದು. ಮಂಗಳೂರು ಸೆಂಟ್ರಲ್ ಮಾರುಕಟ್ಟೆಯನ್ನು ಈಗಾಗಲೇ ಸಮೀಕ್ಷೆ ಮಾಡಿದ್ದು, ಇದ್ದ ಜಾಗದಲ್ಲೇ ಕಡಿಮೆ ಅವಧಿಯಲ್ಲಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು. ಕೆಪಿಟಿಯಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಅಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿಯವರ ಜೊತೆ ಈಗಾಗಲೇ ಚರ್ಚೆ ನಡೆದಿದೆ. ಅವರು ಮನಪಾಕ್ಕೆ ಅನುಮತಿ ನೀಡಿದ್ದಲ್ಲಿ ಅಲ್ಲಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಹರಿನಾಥ್ ಪ್ರತಿಕ್ರಿಯಿಸಿದ್ದಾರೆ.

ನಗರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸುಮಿತ್ರಾ ಕರಿಯ

ತಾನು ಉಪ ಮೇಯರ್ ಸ್ಥಾನವೇರಲು ಸಹಕರಿಸಿದ ಪಕ್ಷಕ್ಕೆ ಆಭಾರಿಯಾಗಿದ್ದು, ನಗರದ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಉಪ ಮೇಯರ್ ಸುಮಿತ್ರಾ ಕರಿಯ ನುಡಿದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ಪಕ್ಷದ ಹಿರಿಯ ಸದಸ್ಯರು, ಕಾರ್ಯಕರ್ತರು, ಹಿತೈಷಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News