ಮಂಗಳೂರು: ಸಾವಯವ ಕೃಷಿಗೆ ಆದ್ಯತೆ:ಟಿ.ಬಿ.ಜಯಚಂದ್ರ
ಮಂಗಳೂರು,ಮಾ.12: ರಾಜ್ಯದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಸಾವಯವ ಕೃಷಿಯ ಇಂತಹ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ದ.ಕ ಜಿಲ್ಲಾ ತೋಟಗಾರಿಕೆ ಇಲಾಖೆ , ಖಾದಿ ಗ್ರಾಮೋದ್ಯಗ ಇಲಾಖೆ , ಆಯುಷ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದು ನಗರದ ಕದ್ರಿ ಉದ್ಯಾನವನದಲ್ಲಿ ಜೇನಿನ ಝೇಂಕಾರ ಹಾಗೂ ಸಾವಯವ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಜನರಿಗೆ ಸಾವಯವ ಮತ್ತು ಜೇನು ಕೃಷಿಯ ಬಗ್ಗೆ ಅರಿವು ಮೂಡಿಸಲು ಇಂತಹ ಮೇಳಗಳು ಅಗತ್ಯವಿದೆ. ಸಾವಯವದತ್ತ ಜನರನ್ನು ಆಕರ್ಷಿಸಬೇಕಾದ ಅಗತ್ಯವಿದೆ. ಸಾವಯವ ಕೃಷಿ ಬಳಕೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೋ , ದ.ಕ ಜಿಲ್ಲಾಧಿಕಾರಿ ಎ.ಬಿ .ಇಬ್ರಾಹೀಂ, ದ.ಕ ಜಿ.ಪಂ ಸಿಇಓ ಪಿ.ಐ.ಶ್ರೀವಿದ್ಯಾ, ದ.ಕ .ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ದ.ಕ ಜಿಲ್ಲೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಹೆಚ್.ಆರ್ ಉಪಸ್ಥಿತರಿದ್ದರು.
ಜೇನು ಝೇಂಕಾರ ಮತ್ತು ಸಾವಯವ ಮೇಳ ಉದ್ಘಾಟಿಸಿದ ಸಚಿವ ಟಿ.ಬಿ.ಜಯಚಂದ್ರ ಮೇಳ ಉದ್ಘಾಟಿಸಿದ ಸಂದರ್ಭದಲ್ಲಿ ಮಳಿಗೆಗಳನ್ನು ವೀಕ್ಷಿಸಿ ಸಾವಯವ ಕೃಷಿಯಿಂದ ಬೆಳೆದ ಸಪೋಟ ಹಣ್ಣನ್ನು ತಿಂದು ಜೇನಿನಿಂದ ತಯಾರಿಸಿದ ಜ್ಯೂಸ್ ಸೇವಿಸಿದರು.
ಕಾರ್ಯಕ್ರಮದಲ್ಲಿ ಜೇನು ಕೃಷಿಗೆ ಸಂಬಂಧಿಸಿದ ವಿವಿಧ ಪರಿಕರಗಳ ಪ್ರದರ್ಶನ, ಜೀವಂತ ಜೇನು ಕುಟುಂಬ ಪ್ರದರ್ಶನ, ಜೇನಿನ ವಿವಿಧ ಪ್ರಭೇದಗಳ ಪ್ರದರ್ಶನ, ದಕ್ಷಿಣ ಕನ್ನಡ ಜೇನು ಬೆಳೆಗಾರರ ಸಂಘ ಪುತ್ತೂರು ಇವರಿಂದ ಜೇನಿನ ಪ್ರದರ್ಶನ ಹಾಗೂ ಮಾರಾಟ , ಆಯುಷ್ ಇಲಾಖೆಯಿಂದ ಜೇನಿನ ಉಪಯೋಗಗಳು ಹಾಗೂ ಔಷಧೀಯ ಗುಣಗಳ ಕುರಿತು ಮಾಹಿತಿ ನಿಡುವ ಮಳಿಗೆ , ಎಸ್ ಡಿಎಂ ನಾಚುರೋಪತಿ ಕಾಲೇಜು ವಿದ್ಯಾರ್ಥಿಗಳಿಂದ ಜೇನಿನ ವಿವಿಧ ಪೇಯಗಳ ತಯಾರಿ ಹಾಗೂ ಮಾರಾಟ , ವಿವಿಧ ಆಯುರ್ವೇದ ಸಂಘಗಳಿಂದ ಜೇನು ಬಳಕೆ ಮಾಡಿ ತಯಾರಿಸಿದ ಔಷಧಿಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿತ್ತು.
ಸಾವಯವ ಮೇಳಕ್ಕೆ ಸಂಬಂಧಿಸಿದಂತೆ ಸಾವಯವ ಕೃಷಿಕ ಗ್ರಾಹಕರ ಬಳಗ ಮಂಗಳೂರು ಇವರಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ಸಂಘಸಂಸ್ಥೆಗಳಿಂದ ಸಾವಯವ ಉತ್ಪನ್ನಗಳು ಹಾಗೂ ವೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಸಾವಯವ ಕೃಷಿಗೆ ಬಳಕೆ ಮಾಡುವ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ತರಕಾರಿ ಬೆಳೆಗಳ ಬೀಜಗಳ ಮಾರಾಟ, ಸಾವಯವ ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು