×
Ad

ಕಡಬ: ವಿದ್ಯುತ್ ಸಮಸ್ಯೆ ಬಿಜೆಪಿಯಿಂದ ಪಂಜಿನ ಮೆರವಣಿಗೆ-ಪ್ರತಿಭಟನೆ

Update: 2016-03-12 16:45 IST
ಪ್ರತಿಭಟನಕಾರರು ಕಡಬ ಎಇಇ ಅವರಿಗೆ ಮನವಿ ಸಲ್ಲಿಸಿದರು

ಕಡಬ, ಮಾ 12. ಅನಿಯಮಿತ ಲೋಡ್ ಶೆಡ್ಡಿಂಗ್, ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ದ ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪಂಜಿನ ಮೆರವಣಿಗೆ, ಮೆಸ್ಕಾಂ ಕಛೇರಿಯ ಎದುರು ಪ್ರತಿಭಟನೆಯು ಶುಕ್ರವಾರ ಸಾಯಂಕಾಲ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಿಂದ ಹೊರಟ ಪಂಜಿನ ಮೆರವಣಿಗೆಯು ಕಡಬ ಪೇಟೆಯ ಮೂಲಕ ಸಾಗಿ ಮೆಸ್ಕಾಂ ಉಪ ವಿಭಾಗದ ಕಛೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಬಳಿಕ ಮೆಸ್ಕಾಂ ಉಪ ವಿಭಾಗದ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

   ಪ್ರ್ರತಿಭಟನೆಯಲ್ಲಿ ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅಭಾವ ತಲೆದೋರಿದ್ದು ಜನ ಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದರೆ ರಾಜ್ಯ ಸರಕಾರ ನಿದ್ದೆ ಮಾಡುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ರೈತರ ಕೃಷಿ ನಾಶವಾಗಿದೆ. ಸರಿಯಾದ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಈ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಸೋತಿದೆ. ಕಾಂಗ್ರೆಸ್ ಸರಕಾರ ಈ ದೇಶದಲ್ಲಿ ಅರಜಾಕತೆಯನ್ನು ಸೃಷ್ಟಿ ಮಾಡಿದ ಕೀರ್ತಿ ಹೊಂದಿದೆ, ವಿದ್ಯುತ್ ಸಮಸ್ಯೆಯ ಬಗ್ಗೆ ಸಚಿವರಲ್ಲಿ ಮಾತನಾಡಿದ ರೈತನನ್ನು ಜೈಲಿಗಟ್ಟುವ ಕೆಲಸವನ್ನು ನಮ್ಮ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರು ಮಾಡಿ ಅವರ ದರ್ಪದ ರಾಜಕಾರಣವನ್ನು ತೋರಿಸಿಕೊಟ್ಟಿದ್ದಾರೆ. ಇನ್ನು ಮುಂದೆಯಾದರೂ ಮಾನ್ಯ ಇಂಧನ ಸಚಿವರು ದರ್ಪದ ರಾಜಕಾರಣವನ್ನು ನಿಲ್ಲಿಸಿ ರಾಜ್ಯದ ಜನತೆಗೆ ಸಮರ್ಪಕ ವಿದ್ಯುತ್ ಪೂರೈಕೆಯನ್ನು ಮಾಡಬೇಕು, ಕಡಬ ವ್ಯಾಪ್ತಿಯಲ್ಲಿ ಇನ್ನು 15 ದಿವಸದೊಳಗೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸದಿದ್ದರೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೃಷ್ಣ ಶೆಟ್ಟಿ ಹೇಳಿದರು.  ಕಡಬ ಸಿಎ ಬ್ಯಾಂಕ್ ಅಧ್ಯಕ್ಷ ಸೀತರಾಮ ಗೌಡ ಪೊಸವಳಿಕೆ ಮಾತನಾಡಿ, ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಇಲ್ಲಿನ ಜಿ.ಪಂ. ಸದಸ್ಯರು ನೀಚ ಕೆಲಸ ಮಾಡಿದ್ದಾರೆ. ಸರಕಾರ ವಿದ್ಯುತ್ ಸರಿಯಾಗಿ ಕೊಡದಿದ್ದರೆ ಅಧಿಕಾರಿಗಳು ಎಲ್ಲಿಂದ ಕೊಡುವುದು? ಅದಕ್ಕಾಗಿ ನಾವು ಇಂದು ಸರಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೆವೆ. ಇಲ್ಲಿನ ಜಿ.ಪಂ. ಸದಸ್ಯರು ತಮ್ಮದೆ ಸರಕಾರ ಇರುವಾಗ ಸಮಸ್ಯೆಯನ್ನು ಸಂಬಂಧಪಟ್ಟವರ ಮೂಲಕ ಸರಿಪಡಿಸುವುದನ್ನು ಬಿಟ್ಟು ಮೆಸ್ಕಾಂಗೆ ಮುತ್ತಿಗೆ ಹಾಕುವ ಮೂಲಕ ಸಣ್ಣ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ನಾಯಕ್, ಪ್ರಧಾನ ಕಾರ್ಯದರ್ಶಿ ವಾಡ್ಯಪ್ಪ ಗೌಡ ಎರ್ಮಾಯಿಲ್ ಮಾತನಾಡಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎ.ಬಿ. ಮನೋಹರ್ ರೈ, ಐತ್ತೂರು ತಾ.ಪಂ. ಸದಸ್ಯೆ ಪಿ.ವೈ.ಕುಸುಮಾ, ಪ್ರಮುಖರಾದ ಪ್ರಕಾಶ್ ಎನ್.ಕೆ, ದಾಮೋಧರ ಗೌಡ ಡೆಪ್ಪುಣಿ, ಸರೋಜಿನಿ ಆಚಾರ್ಯ, ಗಿರೀಶ್ ಎ.ಪಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಕಡಬ ಪೋಲಿಸರು ಬಂದೋಬಸ್ತು ಏರ್ಪಡಿಸಿದ್ದರು.

ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ-ಸುರೇಶ್ ಕುಮಾರ್, ಮೆಸ್ಕಾಂ ಎ.ಇ.ಇ  ಪ್ರತಿಭಟನೆಯ ಬಳಿಕ ಕಡಬ ಮೆಸ್ಕಾಂ ಉಪ ವಿಭಾಗದ ಸಹಾಯಕ ಅಭಿಯಂತರ ಸುರೇಶ್ ಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಎ.ಇ.ಇ.ಯವರು, ಈಗಾಗಲೇ ನಮ್ಮ ಉಪ ವಿಭಾಗದಲ್ಲಿ ವೇಳಾಪಟ್ಟಿಯೊಂದನ್ನು ರಚಿಸಿಕೊಂಡು ನಮ್ಮ ಫೀಡರ್‌ಗಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ 33 ಕೆ.ವಿ ಲೈನ್ ನಲ್ಲಿ ಆಗುವ ಅಡಚನೆಯಿಂದ ತೊಂದರೆಯಾಗಿದೆ, ಈ ಭಾಗದ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ತಾಂತ್ರಿಕ ಬದಲಾವಣೆಯನ್ನು ಮಾಡಿಕೊಂಡು ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪ್ರತಿದಿನ 4 ಗಂಟೆ ತ್ರೀಪೇಸ್ ಹಾಗೂ ಬೆಳಿಗ್ಗೆ ರಾತ್ರಿ ಸಿಂಗಲ್ ಪೇಸ್ ವಿದ್ಯುತ್ ನೀಡಿ ಸಮಸ್ಯೆಯನ್ನು ಪರಿಹರಿಸುತ್ತೇವೆ. ಕಡಬ ಪೇಟೆಯಲ್ಲಿ ಈಗಾಗಲೇ ದಿನದಲ್ಲಿ 3 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು ಇನ್ನು 2 ಗಂಟೆ ಮಾತ್ರ ಕಡಿತ ಮಾಡಲಾಗುವುದು ಗ್ರಾಹಕರು ಸಹಕರಿಸುವಂತೆ ವಿನಂತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News