ಸುಳ್ಯ: ಅಸಮರ್ಪಕ ಮರಳು ನೀತಿಗೆ ವಿರೋಧ ಮರಳು ಸಾಗಾಟ ಸ್ಥಗಿತಗೊಳಿಸಿದ ಲಾರಿ ಮಾಲಕರು
ಸುಳ್ಯ: ಸರಕಾರದ ಅಸಮರ್ಪಕ ಮರಳು ನೀತಿಯಿಂದ ತೊಂದರೆಯಾಗಿದೆ ಎಂದು ಆರೋಪಿಸಿ ಲಾರಿ ಚಾಲಕ ಮಾಲಕ ಸಂಘದವರು ಮರಳು ಸಾಗಾಟ ಸ್ಥಗಿತಗೊಳಿಸಿದ್ದು, ಒಂದು ವಾರದೊಳಗೆ ಸಮಸ್ಯೆಗೆ ಸ್ಪಂದಿಸದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಲಾರಿ ಚಾಲಕ ಮಾಲಕ ಸಂಘ, ಇಂಜಿನಿಯರ್ಸ್ ಅಸೋಸಿಯೇಶನ್, ಕಟ್ಟಡ ಕೂಲಿ ಕಾರ್ಮಿಕ ಸಂಘ, ಮರಳು ವ್ಯಾಪಾರಸ್ಥರು ಹಾಗೂ ಬಿಲ್ಡಿಂಗ್ ಕಂಟ್ರಾಕ್ಟ್‌ದಾರರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಾರಿ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಅಡ್ಕಾರ್, 3 ವರುಷದ ಹಿಂದೆ ರಾಜ್ಯ ಸರಕಾರ ಏಕರೂಪ ಮರಳು ನೀತಿ ಜಾರಿಗೊಳಿಸಿತ್ತು. ಆದರೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಮರಳು ಅಭಾವ ತಲೆದೋರಿತು. ಈ ಕುರಿತು ಉಸ್ತುವಾರಿ ಸಚಿವರಿಗೆ ನಾವು ಮನವಿ ಅರ್ಪಿಸಿ ಈ ಹಿಂದಿನಂತೆ ಸುಳ್ಯ ತಾಲೂಕಿನ ಮರಳು ನಿಕ್ಷೇಪಗಳಿಂದ ಮರಳು ತೆಗೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಾಗ ಅವರ ಸ್ಪಂದಿಸಿದ್ದರು. ಇದೀಗ ರಾಜ್ಯದಲ್ಲಿ ಮತ್ತೆ ಹೊಸ ನೀತಿ ಜಾರಿಗೆ ಬಂದಿದ್ದು ಕರಾವಳಿಯ ಮೂರು ಜಿಲ್ಲೆಗಳಿಗೆ 2 ಕಾನೂನು ಅನ್ವಯಿಸಲಾಗಿದೆ. ಎಸ್‌ಇಝೆಡ್ ಮತ್ತು ನಾನ್ ಎಸ್‌ಇಝೆಡ್ ಎಂದು ವಿಂಗಡಿಸಲಾಗಿದೆ. ಇದಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿದ್ದ ಮರಳು ಅಧಿಕಾರವನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಮಂಗಳೂರಿನಲ್ಲಿರುವ 4 ಬ್ಲಾಕ್‌ಗಳಿಂದ ಮಾತ್ರ ಮರಳು ಸಂಗ್ರಹಿಸಿ ಯಾರ್ಡ್ ನಲ್ಲಿ ಹಾಕಿ ಅಲ್ಲಿಂದ ಏಲಂ ಮೂಲಕ ಮರಳು ಪಡೆಯಬೇಕಾಗಿದೆ. ಇದರಿಂದ ಮರಳಿನ ದರದಲ್ಲಿ ಭಾರಿ ಏರಿಕೆಯಾಗಿದೆ ಮಾತ್ರವಲ್ಲ ಮರಳು ಸಿಗುವುದೂ ಕಷ್ಟವಾಗಿದೆ. ಇದು ನಮ್ಮನ್ನು ಮಾತ್ರವಲ್ಲ ಮನೆ, ಕಟ್ಟಡ ನಿರ್ಮಿಸುವ ಎಲ್ಲರನ್ನೂ ಭಾಗಿಸುತ್ತಿದೆ. ಸರಕಾರದ ವಸತಿ ಯೋಜನೆಗಳೂ ಬಾಕಿ ಆಗುವಂತಾಗಿದೆ. ಈ ಎಲ್ಲಾ ಕಷ್ಟಗಳ ಹಿನ್ನಲೆಯಲ್ಲಿ ನಾವು ಇಂದಿನಿಂದಲೇ ಮರಳು ಸಾಗಾಟ ಸ್ಥಗಿತಗೊಳಿಸಿದ್ದೇವೆ. ಇತರ ಯಾರಿಗೂ ಸಾಗಾಟ ಮಾಡಲು ಅವಕಾಶ ಮಾಡುವುದಿಲ್ಲ ಎಂದು ಹೇಳಿದರು.
ಜಿಲ್ಲಾಡಳಿತ ನಮ್ಮ ಬೇಡಿಕೆಗೆ ಸ್ಪಂದಿಸಿ ತಾಲೂಕಿನಲ್ಲೆ ಈ ಹಿಂದಿನಂತೆಯೇ ಮರಳು ತೆಗೆಯಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಸಂಭಂದಿಸಿ ರಾಯಧನ ಪಾವತಿಸಲು ನಾವು ಸಿದ್ದರಿದ್ದೇವೆ. ಕರಾವಳಿಯ ನದಿಗಳ ನೀರು ಸಮುದ್ರ ಸೇರುವುದಾಗಿದ್ದು, ಇಲ್ಲಿ ಮರಳು ತೆಗೆಯದೆ ಹೂಳು ತುಂಬಿದರೆ ಅದು ಪ್ರಕೃತಿಯ ಮೇಲೆ ಕೂಡಾ ಪರಿಣಾಮ ಬೀರಿ ನೆರೆ ಸೃಷ್ಟಿಯಾಗುತ್ತದೆ. ಈ ಎಲ್ಲ ಹಿನ್ನಲೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಸುಳ್ಯ ತಾಲೂಕು ಕಛೇರಿ ಎದುರು ಪ್ರತಿಭಟನೆ ಮಾಡುತ್ತೇನೆ ಎಂದು ದಿನೇಶ್ ಅಡ್ಕಾರ್ ಹೇಳಿದರು.
ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೀವನ್ ನಾರ್ಕೋಡು , ಲಾರಿ ಚಾಲಕ ಮಾಲಕ ಸಂಘದ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ , ಮರಳು ವ್ಯಾಪಾರಸ್ಥರಾದ ಅನಿಲ್ ಕುಮಾರ್ , ಲಾರಿ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ. ಇಂಜಿನಿಯರ್ ಅಸೋಸಿಯೇಶನ್ ಗೌರವಧ್ಯಕ್ಷ ಕೃಷ್ಣ ರಾವ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿದ್ದರು.