ಮಂಗಳೂರು: ವಿವಿ ಅಂತರ್ ಕಾಲೇಜು ಪುರುಷರ ಖೋ ಖೋ ಪಂದ್ಯಾಟ ಸಮಾರೋಪ
ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ 11ನೇ ಬಾರಿಗೆ ಚಾಂಪಿಯನ್ ಸುಳ್ಯ: ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ ಖೋ ಖೋ ಪಂದ್ಯಾಟ ಸಮಾರೋಪಗೊಂಡಿದೆ. ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ನೆಟ್ಟಾರು ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟಕ್ಕೆ ಸಹಕರಿಸಿದವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಸಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಬಹುಮಾನ ವಿತರಿಸಿದರು. ಸದಸ್ಯ ರಮಾನಂದ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ ಮಾಣಿಬೆಟ್ಟು, ಮಂಗಳೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಕ ನಿರ್ದೇಶಕ ಡಾ.ಪ್ರಸನ್ನ ಅತಿಥಿಗಳಾಗಿದ್ದರು. ದಕ್ಷಿಣ ಭಾರತ ಮಟ್ಟದ ವಿಶ್ವ ವಿದ್ಯಾನಿಲಯಗಳ ಪುರುಷರ ಖೋ ಖೋ ಪಂದ್ಯಾಟದಲ್ಲಿ ಚಾಂಪಿಯನ್ ಆದ ಮಂಗಳೂರು ವಿವಿ ತಂಡದ ಆಟಗಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಉಪನ್ಯಾಸಕ ರಾಮಚಂದ್ರ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್ ಕೊಯಿಂಗಾಜೆ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಚ್ಚುತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್‌ಗೆ ಪ್ರಶಸ್ತಿ
ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಮಂಗಳೂರು ವಿವಿ ಕ್ಯಾಂಪಸ್ ಕಾಲೇಜು ತಂಡವನ್ನು 9-4, 8-5 ಅಂಕಗಳಿಂದ ಸೋಲಿಸಿ ಸತತ 11ನೇ ಬಾರಿಗೆ ಚಾಂಪಿಯನ್ ಆಗಿ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿತು. ಅರ್ಹತಾ ಸುತ್ತಿನಲ್ಲಿ ಆಳ್ವಾಸ್ ಬಿಪಿಎಡ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದರೆ, ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ, ಕಾರ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಹಾಗೂ ಬಾರ್ಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಚತುರ್ಥ ಬಹುಮಾನ ಪಡೆಯಿತು. ಚಾಂಪಿಯನ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಪ್ರಥಮ, ಮಂಗಳೂರು ವಿವಿ ಕ್ಯಾಂಪಸ್ ಕಾಲೇಜು ತಂಡ ದ್ವಿತೀಯ, ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಹಾಗೂ ಆಳ್ವಾಸ್ ಬಿಪಿಎಡ್ ತಂಡ ಚತುರ್ಥ ಬಹುಮಾನ ಪಡೆದವು.