ಪುತ್ತೂರು: ಬಲತ್ಕಾರ ಬಂದ್ ವಿರೋಧಿ ಆಂದೋಲನಕ್ಕೆ ಅಡ್ಡಿ: ಕಿಡಿಗೇಡಿಗಳಿಂದ ‘ಸುದ್ದಿ’ ಕಾರಿಗೆ ಕಲ್ಲೆಸೆದು ಹಾನಿ
ಪುತ್ತೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಬಲತ್ಕಾರದ ಬಂದ್ ಹಾಗೂ ಕೋಮು ಗಲಭೆ ವಿರುದ್ದ ಜನಜಾಗೃತಿ ಮೂಡಿಸುತ್ತಿರುವ ಪುತ್ತೂರಿನ ‘ಸುದ್ದಿ ಆಂದೋಲನ’ಕ್ಕೆ ಹಿನ್ನಡೆ ಮಾಡುವಲ್ಲಿ ಕಿಡಿಗೇಡಿಗಳು ಪ್ರಯತ್ನ ನಡೆಸುತ್ತಿದ್ದು, ಬಂದ್ ವಿರುದ್ದ ಹಾಕಿರುವ ಬ್ಯಾನರ್‌ಗಳನ್ನು ಕಿತ್ತೆಸೆಯುವುದು, ಸುದ್ದಿ ಬಳಗದ ಕಾರಿಗೆ ಕಲ್ಲು ಹೊಡೆದು ಹಾನಿಗೊಳಿಸುವ ಕೆಲಸ ಮಾಡುತ್ತಿದೆ. ಪುತ್ತೂರಿನಲ್ಲಿ ಬಂದ್ ವಿರೋಧಿ ಬ್ಯಾನರನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಸುದ್ದಿ ಬಳಗವು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಉಪ್ಪಿನಂಗಡಿಯಲ್ಲಿ ನಿಲ್ಲಿಸಲಾಗಿದ್ದ ಸುದ್ದಿ ಬಳಗದ ಕಾರಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಕಾರಿನ ಹಿಂಬಾಗದ ಗಾಜು ಪಡಿಯಾಗಿದ್ದು ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಇಂಗ್ಲೀಷ್ ಸಂವಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯ ಸಿಬ್ಬಂದಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಪತ್ರಿಕಾ ಕಚೇರಿಯ ಓಮ್ನಿ ಕಾರಿನಲ್ಲಿ ಬಂದಿದ್ದರು.
ಕಾರನ್ನು ಕಾಲೇಜು ಆವರಣದಲ್ಲಿ ನಿಲ್ಲಿಸಿ, ಅವರು ಕಾಲೇಜಿನೊಳಗೆ ಹೋಗಿದ್ದು, ಹಿಂದುರಿಗಿ ಬರುವಾಗ ಕಾರಿಗೆ ಯಾರೋ ಕಲ್ಲೆಸೆದು ಕಾರಿನ ಹಿಂಬದಿ ಗಾಜಿಗೆ ಹಾನಿ ಮಾಡಿದ್ದಾರೆ. ಬಲಾತ್ಕಾರದ ಬಂದ್ ನಡೆಸುವುದರಿಂದ ಸಮಾಜದ ಮೇಲಾಗುವ ಅನಾಹುತ ಹಾಗೂ ಕೋಮುಗಲಭೆಯಿಂದ ಸಮಾಜಕ್ಕೆ ಆಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಮೂಡಿಸುವ ಕಾರ್ಯವನ್ನು ಸುದ್ದಿ ಆಂದೋಲನದ ಮೂಲಕ ಮಾಡಲಾಗುತ್ತಿದೆ. ಸ್ಥಳೀಯ ಸುದ್ದಿ ಪತ್ರಿಕೆ ಈ ಬಗ್ಗೆ ನಿತ್ಯವೂ ಲೇಖನಗಳನ್ನು ಪ್ರಕಟಿಸಿ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಈ ಆಂದೋಲನಕ್ಕೆ ಆರಂಭದಲ್ಲೇ ಕೆಲ ಕೋಮುವಾದಿ ಶಕ್ತಿಗಳಿಂದ ವಿರೋಧ ವ್ಯಕ್ತವಾಗಿತ್ತು. ಬಲಾತ್ಕಾರದ ಬಂದ್ ಬೇಕು, ಪುತ್ತೂರಿನಲ್ಲಿ ಕೋಮುಗಲಭೆ ಆಗಬೇಕು, ಜಿಲ್ಲೆ ಹೊತ್ತಿ ಉರಿಯಬೇಕು ಹಾಗಿದ್ದಲ್ಲಿ ಮಾತ್ರ ಇಲ್ಲಿ ನೆಮ್ಮದಿ ಎಂದು ಕೆಲವು ವಿಕೃತ ಮನೋಭಾವದ ವಿಘ್ನ ಸಂತೋಷಿಗಳು ಸುದ್ದಿ ಆಂದೋಲನದ ವಿರುದ್ದ ಸಾಮಾಜಿಕ ತಾಣದಲ್ಲಿ ಮೆಸೇಜ್ ಹಾಕಲು ಪ್ರಾರಂಭಿಸಿದ್ದು ಮಾತ್ರವಲ್ಲದೆ ಸುದ್ದಿ ಪತ್ರಿಕೆಯ ಸಂಪಾದಕರಿಗೂ ಜೀವ ಬೆದರಿಕೆಯನ್ನು ಹಾಕುತ್ತಿದ್ದರು. ಈ ಕುರಿತು ಸುದ್ದಿ ಸಂಪಾದಕರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.
ಸುದ್ದಿ ಆಂದೋಲನದ ವಿರುದ್ದ ಸಾಮಾಜಿಕ ತಾಣದಲ್ಲಿ ಪೋಸ್ಟರ್ ಹಾಕಿರುವ ಆರೋಪದಲ್ಲಿ ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಕಿಡಿಗೇಡಿಗಳ ಕೃತ್ಯ ಇದೀಗ ಮುಂದುವರಿದಿದ್ದು, ಸುದ್ದಿ ಕಚೇರಿಯ ಮುಂಭಾಗದಲ್ಲಿ ಹಾಕಲಾಗಿದ್ದ ಬಲತ್ಕಾರದ ಬಂದ್ ಮತ್ತು ಕೋಮು ಗಲಭೆ ವಿರೋಧಿ ಆಂದೋಲನದ ಬ್ಯಾನರನ್ನು ಹರಿದು ಹಾಕಿದ್ದಾರೆ ಅಲ್ಲದೆ ಸುದ್ದಿ ಬಳಗದ ವಾಹನಕ್ಕೆ ಉಪ್ಪಿನಂಗಡಿಯಲ್ಲಿ ಕಲ್ಲು ತೂರಾಟ ನಡೆಸಿ ತಮ್ಮ ದುಷ್ಕೃತ್ಯ ಮೆರೆದಿದ್ದಾರೆ. ಸುದ್ದಿ ಆಂದೋಲನಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಪುತ್ತೂರಿನ ಜನತೆ ತಮಗೆ ಬಂದ್ ಬೇಡ ಎಂಬ ಪೋಸ್ಟರ್‌ಗಳನ್ನು ತಮ್ಮ ಅಂಗಡಿ ಮುಂಬಾಗದಲ್ಲಿ ಅಳವಡಿಸುತ್ತಿದ್ದಾರೆ. ಪುತ್ತೂರಿನ ವರ್ತಕರು ಹಾಗೂ ಇನ್ನಿತರರು ಬಂದ್ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ತಾಲೂಕು ಮಟ್ಟದಲ್ಲಿ ಬಂದ್ ವಿರೋಧಿ ಸಮಿತಿಯನ್ನೂ ರಚಿಸಲಾಗಿದ್ದು, ಆ ಮೂಲಕ ಇಲ್ಲಿ ಸಾಮರಸ್ಯ ಬೆಳೆಸುವ ಹಾಗೂ ಕೋಮು ವಿರೋಧಿ ಭಾವನೆ ತಡೆಯುವ ಕೆಲಸಕ್ಕೆ ಸಾರ್ವಜನಿಕರು ಮುಂದಾಗಿದ್ದಾರೆ. ಪೊಲೀಸರು ಮಾಡಬೇಕಾಗಿದ್ದ ಈ ಕೆಲಸವನ್ನು ಇದೀಗ ಸುದ್ದಿ ಆಂದೋಲನದ ಮೂಲಕ ಜನರು ಮಾಡುತ್ತಿದ್ದಾರೆ. ಇದನ್ನು ಸಹಿಸದೆ ಕೋಮುವಾದಿ ಶಕ್ತಿಗಳು ಆಂದೋಲನವನ್ನು ವಿಫಲಗೊಳಿಸುವುದಕ್ಕಾಗಿ ಇದೀಗ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.