ಭಟ್ಕಳ: ನಾಗಯಕ್ಷೆ ಸಭಾಭವನದಲ್ಲಿ ಮಹಿಳಾ ದಿನಾಚರಣೆ
ಭಟ್ಕಳ: ಇಲ್ಲಿನ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಎರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶ್ರೀದೇವಿ ಎಂ ಭಟ್ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಸಂಜೀವಿನಿ ಸಮಾಜ ಸೇವಾ ಸಂಸ್ಥೆ, ತಾಲೂಕಾ ಮಹಿಳಾ ಸ್ವ ಸಹಾಯ ಸಂಘ, ಮೇಘಶ್ರೀ ಸಂಘ ಮಂಕಿ, ಸಿ.ಡಿ.ಪಿ.ಓ. ಇಲಾಖೆ, ಅರ್ಬನ್ ಬ್ಯಾಂಕ್, ಪಿ.ಎಲ್.ಡಿ. ಬ್ಯಾಂಕ್, ಜನತಾ ಸಹಕಾರಿ ಪತ್ತಿನ ಸಂಘ, ಕೆ.ವಿ.ಜಿ. ಬ್ಯಾಂಕ್, ರೋಟರಿ ಕ್ಲಬ್, ಕೃಷಿ, ತೋಟಗಾರಿಕೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಮಾತನಾಡಿ ಕಳೆದ 16 ವರ್ಷಗಳಿಂದ ಮಹಿಳಾ ಸಂಘಟನೆಯನ್ನು ಮಾಡುತ್ತಾ ನಿರಂತರವಾಗಿ ಮಹಿಳೆಯರ ಕುರಿತು ಚಿಂತಿಸುವ ಸುಮಾವತಿ ಶೆಟ್ಟಿಯವರ ಶ್ರಮ ಸಾರ್ಥಕವಾಗಿದೆ. ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ಸ್ವ ಸಹಾಯ ಸಂಘಗಳ ಉದ್ಘಾಟನೆ ಕೂಡಾ ನೆರವೇರಿಸಿರುವುದು ಸಂತಸ ತಂದಿದೆ ಎಂದರು. ಮಹಿಳೆಯರ ಜೊತೆ ಸದಾ ತಾವು ಸ್ಪಂಧಿಸುವುದಾಗಿ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ ನೂತನ ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ ಸ್ವ ಸಹಾಯ ಸಂಘಗಳ ಚಟುವಟಿಕೆಗಳು ಆರ್ಥಿಕವಾಗಿ ಆಶಾದಾಯಕ ಭರವಸೆಯನ್ನು ಮೂಡಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಲು ಸಂತಸವಾಗಿದ್ದು ಮುಂದೆಯೂ ಕೂಢಾ ಸ್ವ ಸಹಾಯ ಸಂಘಗಳ ಎಲ್ಲ ಚಟುವಟಿಕೆಗಳಿಗೆ ಸಹಾಯಕ್ಕೆ ಸದಾ ಸಿದ್ಧನಿದ್ದೇನೆ ಎಂದೂ ಹೇಳಿದರು. ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ಇವರು ಮಾತನಾಡಿ ಮಹಿಳಾ ದಿನಾಚರಣೆ ಈ ಬಾರಿ ಶಿವರಾತ್ರಿ ಹಬ್ಬದಂದು ಬಂದಿದೆ. ನಿಜವಾಗಿಯೂ ಮಹಿಳೆಯರು ಶಿವರಾತ್ರಿ ಹಬ್ಬವನ್ನು ಆಚರಿಸಿದಂತಾಗಿದೆ ಎಂದರು. ಹೈನುಗಾರಿಕೆ ಮಾಡಲು ಇಚ್ಚಿಸುವವರು ಶೇ.4ರ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉನ್ನತಗೊಳಿಸಿ ಹಾಗೂ ಈ ಸೌಲಭ್ಯ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಲಭ್ಯವಿದ್ದು ಅರ್ಹರು ಪಡೆಯಲು ಸಹಾಯ ಮಾಡುವುದಾಗಿಯೂ ಭರವಸೆಯನ್ನು ನೀಡಿದರು. ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದು ಉಪನ್ಯಾಸ ನೀಡಿದ ಹಿರಿಯ ಆರೋಗ್ಯ ನಿರೀಕ್ಷಕ ಈರಯ್ಯ ದೇವಾಡಿಗ ಆರೋಗ್ಯ ಇಲಾಖೆಯಲ್ಲಿ ಮಹಿಳೆಯರಿಗೆ ಸಿಗುವಂತಹ ಸೌಲಭ್ಯ ಹಾಗೂ ಮಹಿಳಾ ದಿನಾಚರಣೆಯ ಅಗತ್ಯತೆಯ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾದ ಸಹಾಯಕ ಕೃಷಿ ನಿರ್ದೇಶಕ ಜೆ.ಡಿ.ಮರಗೋಡ, ಕೆ.ವಿ.ಜಿ.ಬ್ಯಾಂಕಿನ ಹಿರಿಯ ಶಾಖಾಧಿಕಾರಿ ಸೂರ್ಯನಾರಾಯಣ ರಾವ್, ಮೇಘಶ್ರೀ ಸಂಸ್ಥೆಯ ಖಜಾಂಚಿ ಶಂಕರ ನಾಯ್ಕ ಮಾತನಾಡಿದರು. ಆರತಿ ಆಚಾರ್ಯ ಸಂಗಡಿಗರು ಪ್ರಾರ್ಥನೆ ಹಾಡಿದರು. ಜಯಲಕ್ಷ್ಮೀ ನಾಯ್ಕ ಸ್ವಾಗತ ಗೀತೆ ಹಾಡಿದರು. ಸಂಘದ ಅಧ್ಯಕ್ಷೆ ಸುಮಾವತಿ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೇಯಾ ಸಚಿನ್ ಮಹಾಲೆ ವರದಿ ವಾಚಿಸಿದರು. ಮಂಜುಳಾ ಆಚಾರ್ಯ ಸ್ವಾಗತಿಸಿದರು, ಮಂದಾಕಿನಿ ಹೆಬ್ಬಾರ್ ನಿರ್ವಹಿಸಿದರು. ಮಂಜಮ್ಮ ಗೊಂಡ ವಂದಿಸಿದರು.