×
Ad

ಮಂಗಳೂರು : ಕೆಪಿಟಿಯಲ್ಲಿ ಏರೊಸ್ಪೇಸ್ ಇಂಜನಿಯರಿಂಗ್ ಕೋರ್ಸ್ ಆರಂಭಿಸಲು ಸಚಿವ ಜಯಚಂದ್ರ ನಿರ್ದೇಶನ

Update: 2016-03-12 19:57 IST

ಮಂಗಳೂರು, ಮಾ.12: ಸಕಲ ರೀತಿಯ ಡಿಪ್ಲೊಮಾ ಕೋರ್ಸ್‌ಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಂದ ಕೂಡಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ(ಕೆಪಿಟಿ) ಏರೋಸ್ಪೇಸ್ ಕೋರ್ಸ್ ಅನ್ನು ಆರಂಭಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಅವರು ಇಂದು ನಗರದ ಕರ್ನಾಟಕ(ಸರ್ಕಾರಿ) ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ವಿದ್ಯಾರ್ಥಿನಿ ನಿಲಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕೆಪಿಟಿಯಲ್ಲಿ 1400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಅಲ್ಲದೆ, ಪ್ರತಿಯೊಂದು ಕೋರ್ಸ್‌ಗಳು ಇಲ್ಲಿವೆ. ಕರ್ನಾಟಕ ಏರೋಸ್ಪೇಸ್ ಹಬ್ ಆಗಿ ಗುರುತಿಸಿಕೊಂಡಿದೆ. ಮಂಳೂರಿನಲ್ಲಿ ಈ ಕೋರ್ಸ್ ಆರಂಭಿಸಲು ಎಲ್ಲಾ ರೀತಿಯ ಅರ್ಹತೆಗಳಿದ್ದು, ಎಚ್‌ಎಎಲ್ ನಿರ್ದೇಶಕರೊಂದಿಗೆ ಈಗಾಗಲೇ ಇದಕ್ಕೆ ಅಗತ್ಯವಾದ ಮಾನವ ಸಂಪಲನ್ಮೂಲಗಳ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಅಧ್ಯಯನ ಮಾಡಿ ರೂಪುರೇಷೆ ಸಿದ್ದಪಡಿಸಬೇಕು ಎಂದು ಅವರು ಹೇಳಿದರು.
ಕೆಪಿಟಿಗೆ ಭೇಟಿ ನೀಡುವವರೆಗೆ ಏರೊಸ್ಪೇಸ್ ಕೋರ್ಸ್ ಅನ್ನು ಆರಂಭಿಸಬೇಕು ಎನ್ನುವ ಆಲೋಚನೆಯೇ ಇರಲಿಲ್ಲ. ಕೆಪಿಟಿಯನ್ನು ನೋಡಿದ ತಕ್ಷಣ ಈ ಆಲೋಚನೆ ಬಂದಿದೆ ಎಂದು ಹೇಳಿದ ಅವರು ಈಗಾಗಲೇ ಕಾಲೇಜಿನ ನವೀಕರಣಕ್ಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬೇಡಿಕೆಯಂತೆ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದರು.
ಜಿಲ್ಲಾ ಉಸುತಿವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕೆಪಿಟಿ ಕರಾವಳಿ ಭಾಗದ ವೃತ್ತಿಪರ ಶಿಕ್ಷಣ ನೀಡುತ್ತಿರುವ ದೊಡ್ಡ ಕಾಲೇಜು ಆಗಿದ್ದು, ಇಲ್ಲಿನ ಮೂಲ ಸೌಕರ್ಯ ಮತ್ತು ನವೀಕರಣಕ್ಕೆ ಉನ್ನತ ಶಿಕ್ಷಣ ಸಚಿವರು 2 ಕೋಟಿ ರೂ. ಅನುದಾನ ನೀಡುವ ಭರವಸೆ ಇದೆ ಎಂದರು.
ಕೆಪಿಟಿ ಪ್ರಾಂಶುಪಾಲರಾದ ವಿ. ಸುಶೀಲಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಮಾನವ ಅಭಿವೃದ್ಧಿ ಇಲಾಖೆಯಿಂದ 1 ಕೋಟಿ ರೂ. ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 12 ಕೊಠಡಿಗಳಿವೆ. ಅದರಲ್ಲಿ 3 ಕೊಠಡಿಗಳನ್ನು ವಿಕಲಚೇತನರಿಗೆ ಮೀಸಲಿಡಲಾಗಿದೆ ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಕೆಪಿಟಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೆ. ಅಭಯಚಂದ್ರ, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ್, ತಾಂತ್ರಿಕ ಅಧಿಕಾರಿ ಸಿ.ಡಿ. ರಾಮಲಿಂಗಯ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು. ಕೆಪಿಟಿ ವಿಭಾಗಾಧಿಕಾರಿ ಅಬ್ದುಲ್ ಖಾದರ್ ಸ್ವಾಗತಿಸಿದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News