×
Ad

ಮರಳು ಸಮಸ್ಯೆ: ವ್ಯಾಪಾರಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

Update: 2016-03-12 23:12 IST

ಸುಳ್ಯ, ಮಾ.12: ಸರಕಾರದ ಅಸಮರ್ಪಕ ಮರಳು ನೀತಿಯಿಂದ ತೊಂದರೆಯಾಗಿದೆ ಎಂದು ಆರೋಪಿಸಿ ಲಾರಿ ಚಾಲಕ ಮಾಲಕ ಸಂಘದವರು ಮರಳು ಸಾಗಾಟ ಸ್ಥಗಿತಗೊಳಿಸಿದ್ದು, ಒಂದು ವಾರದೊಳಗೆ ಸಮಸ್ಯೆಗೆ ಸ್ಪಂದಿಸದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಲಾರಿ ಚಾಲಕ ಮಾಲಕ ಸಂಘ, ಇಂಜಿನಿಯರ್ಸ್‌ ಅಸೋಸಿಯೇಶನ್, ಕಟ್ಟಡ ಕೂಲಿ ಕಾರ್ಮಿಕ ಸಂಘ, ಮರಳು ವ್ಯಾಪಾರಸ್ಥರು, ಬಿಲ್ಡಿಂಗ್ ಕಂಟ್ರಾಕ್ಟ್‌ದಾರರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾರಿ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಅಡ್ಕಾರ್, 3 ವರ್ಷಗಳ ಹಿಂದೆ ರಾಜ್ಯ ಸರಕಾರ ಏಕರೂಪ ಮರಳು ನೀತಿ ಜಾರಿಗೊಳಿಸಿತ್ತು. ಆದರೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಮರಳು ಅಭಾವ ತಲೆದೋರಿತು. ಈ ಕುರಿತು ಉಸ್ತುವಾರಿ ಸಚಿವರಿಗೆ ಮನವಿ ಅರ್ಪಿಸಿ ಈ ಹಿಂದಿನಂತೆ ಸುಳ್ಯ ತಾಲೂಕಿನ ಮರಳು ನಿಕ್ಷೇಪಗಳಿಂದ ಮರಳು ತೆಗೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಾಗ ಅವರು ಸ್ಪಂದಿಸಿದ್ದರು. ಇದೀಗ ರಾಜ್ಯದಲ್ಲಿ ಮತ್ತೆ ಹೊಸ ನೀತಿ ಜಾರಿಗೆ ಬಂದಿದ್ದು, ಕರಾವಳಿಯ ಮೂರು ಜಿಲ್ಲೆಗಳಿಗೆ 2 ಕಾನೂನು ಅನ್ವಯಿಸಲಾಗಿದೆ. ಎಸ್‌ಇಝೆಡ್ ಮತ್ತು ನಾನ್‌ಎಸ್ ಇಝೆಡ್ ಎಂದು ವಿಂಗಡಿಸಲಾಗಿದೆ. ಇದಲ್ಲದೆ ಗಣಿ ಮತ್ತು ಭೂ ವಿಜ್ಞ್ಞಾನ ಇಲಾಖೆಯಲ್ಲಿದ್ದ ಅಧಿಕಾರವನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಜಿಲ್ಲಾಡಳಿತ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ದಿನೇಶ್ ಅಡ್ಕಾರ್ ಎಚ್ಚರಿಸಿದರು.

 ಇಂಜಿನಿಯರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಜೀವನ್ ನಾರ್ಕೋಡು, ಲಾರಿ ಚಾಲಕ ಮಾಲಕ ಸಂಘದ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್, ಮರಳು ವ್ಯಾಪಾರಸ್ಥರಾದ ಅನಿಲ್ ಕುಮಾರ್, ಲಾರಿ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಇಂಜಿನಿಯರ್ ಅಸೋಸಿಯೇಶನ್ ಗೌರವಾಧ್ಯಕ್ಷ ಕೃಷ್ಣ ರಾವ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News