×
Ad

ನಾಳೆ ಧರ್ಮಸ್ಥಳ ಪೊಲೀಸ್ ಠಾಣೆ ಉದ್ಘಾಟನೆ

Update: 2016-03-12 23:14 IST

ಬೆಳ್ತಂಗಡಿ, ಮಾ.12: ಬಹುನಿರೀಕ್ಷಿತ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಮಾ.14ರಂದು ಗೃಹಸಚಿವ ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಹೊಸ ಠಾಣೆಯ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 9 ಗ್ರಾಮಗಳು ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 9 ಗ್ರಾಮಗಳು ಬರಲಿವೆ. ಪಶ್ಚಿಮ ವಲಯದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಠಾಣೆ ಎಂದು ಗುರುತಿಸಲ್ಪಟ್ಟಿರುವ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಇದೀಗ ವಿಭಜಿಸಲಾಗಿದ್ದು, ಧರ್ಮಸ್ಥಳ ಕೇಂದ್ರವಾಗಿಸಿ ಹೊಸ ಠಾಣೆ ಆರಂಭಗೂಳ್ಳಲಿದೆ. ನೂತನ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಧರ್ಮಸ್ಥಳ, ಪುದುವೆಟ್ಟು, ಬೆಳಾಲು, ನೆರಿಯ, ಚಿಬಿದ್ರೆ, ಚಾರ್ಮಾಡಿ, ತೋಡತ್ತಾಡಿ, ಮುಂಡಾಜೆ, ಹಾಗು ಕಲ್ಮಂಜ ಗ್ರಾಮಗಳನ್ನು ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿಡ್ಲೆ, ಕಳೆಂಜ, ಪಟ್ರಮೆ, ಕೊಕ್ಕಡ, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ ಬಂದಾರು ಗ್ರಾಮಗಳನ್ನು ಸೇರಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆ ಹಾಗು ಶಿರಾಡಿ ಘಾಟ್ ರಸ್ತೆಯ ನಡುವಿನ ವಿಶಾಲವಾದ ಭೂಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿದ್ದು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಯವರೆಗೆ ವಿಸ್ತರಿಸಿಕೊಂಡಿದೆ. ಹೊಸ ಠಾಣೆಯ ಭೌಗೋಳಿಕ ವ್ಯಾಪ್ತಿ ತುಂಬ ವಿಸ್ತಾರವಾಗಿದ್ದು ಹಲವಾರು ಕುಗ್ರಾಮಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ.

ನೂತನ ಧರ್ಮಸ್ಥಳ ಠಾಣೆಗೆ ಓರ್ವ ಎಸ್ಸೈ, ಇಬ್ಬರು ಎಸ್ಸೈ, 7 ಮಂದಿ ಹೆಚ್‌ಸಿ, 21 ಮಂದಿ ಪಿಸಿ, 2 ಮಂದಿ ಮಹಿಳಾ ಪಿಸಿ ಸೇರಿದಂತೆ 33 ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಹೊಸ ಠಾಣೆಯನ್ನು ತಾತ್ಕಾಲಿಕವಾಗಿ ಧರ್ಮಸ್ಥಳ ಗ್ರಾಪಂ ಕಟ್ಟಡದಲ್ಲಿ ತೆರೆಯಲಾಗುತ್ತದೆ. ಹೊಸ ಠಾಣೆಗೆ ಜಾಗ ಗುರುತಿಸುವ ಕಾರ್ಯವನ್ನೂ ಮಾಡಲಾಗಿದೆ. ಚಾರ್ಮಾಡಿಯಲ್ಲಿ ಹೊರಠಾಣೆ?: ಧರ್ಮಸ್ಥಳದಲ್ಲಿ ಹೊಸ ಪೊಲೀಸ್ ಠಾಣೆ ಆರಂಭವಾಗುವುದರೊಂದಿಗೆ ಚಾರ್ಮಾಡಿಯಲ್ಲಿ ಹೊಸದಾಗಿ ಹೊರ ಠಾಣೆಯೊಂದು ಮಂಜೂರಾಗುವ ಸಾಧ್ಯತೆಯಿದೆ. ಈಗಾಗಲೇ ಇರುವ ಪೊಲೀಸ್ ಚೆಕ್‌ಪೋಸ್ಟ್ ಅನ್ನು ಹೊರ ಠಾಣೆಯಾಗಿ ಮೇಲ್ದರ್ಜೆಗೆ ಏರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News