×
Ad

ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಿ: ಸಚಿವ ಟಿ.ಬಿ.ಜಯಚಂದ್ರ

Update: 2016-03-12 23:21 IST

 ಮಂಗಳೂರು, ಮಾ.12: ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರ ಪಡೆಯದಂತೆ ತಡೆಯುವ ಮಹತ್ವದ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

   ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಂದಿಗೆ ಪೈಪೋಟಿಯಲ್ಲಿರುವ ಪಕ್ಷ ಕೋಮುವಾದಿ ಪಕ್ಷವಾಗಿದ್ದು, ಕೋಮುವಾದವನ್ನು ಪ್ರಚೋದನೆ ಮಾಡುತ್ತಾ ಹೋಗುತ್ತಿದೆ. ಪ್ರಚಾರದಲ್ಲಿ ಗೊಂದಲ ಹುಟ್ಟಿಸುವ ರಾಜಕಾರಣ ಮಾಡುವ ಕೋಮುಶಕ್ತಿಗಳು ರಾಜಕಾರಣಕ್ಕಾಗಿ ಯಾವ ಮಟ್ಟಕ್ಕೂ ಹೋಗಲು ತಯಾರಿವೆ. ಜೆಎನ್‌ಯು ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರಕರಣವನ್ನು ಗಮನಿಸಿದರೆ ವಿಶ್ವವಿದ್ಯಾನಿಲಯದಲ್ಲಿಯೂ ಮೂಗು ತೂರಿಸುತ್ತಿವೆ. ಇದನ್ನು ಎದುರಿಸುವ ದೊಡ್ಡ ಸವಾಲು ಕಾಂಗ್ರೆಸ್ ಪಕ್ಷದ ಮೇಲಿದ್ದು ಜನರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮನವರಿಕೆ ಮಾಡುವ ಪ್ರಯತ್ನಗಳನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭ ಅವರು ನೂತನವಾಗಿ ಆಯ್ಕೆಯಾದ ಮನಪಾ ಮೇಯರ್, ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಉಳ್ಳಾಲ ನಗರಸಭೆಯ ಅಧ್ಯಕ್ಷರನ್ನು ಅಭಿನಂದಿಸಿದರು.

 ಸಭೆಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಚಿವ ಅಭಯಚಂದ್ರ ಜೈನ್, ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಮೇಯರ್ ಹರಿನಾಥ್, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಕೆ.ಅಶ್ರಫ್, ಸದಾಶಿವ ಉಳ್ಳಾಲ್, ಹಿಲ್ಡಾ ಆಳ್ವ, ರಾಮಕೃಷ್ಣ ಆಳ್ವ, ಮುಹಮ್ಮದ್, ಕುಂಞಿಮೋನು, ವಿಶ್ವಾಸ್‌ದಾಸ್, ಭಾರತಿ ಶೆಟ್ಟಿ, ವೆಂಕಪ್ಪ ಗೌಡ, ಹುಸೈನ್, ಪ್ರಕಾಶ್ ತುಂಬೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News