×
Ad

ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ: ಪುರಸ್ಕಾರ ಸ್ವೀಕರಿಸಲು ಮನವಿ

Update: 2016-03-12 23:22 IST

ಮಂಗಳೂರು, ಮಾ. 12: ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದ ಅಮೂಲ್ಯ ದಾಖಲೆ ಹಾಗೂ ವಸ್ತುಗಳನ್ನು ಮಾಲಕನಿಗೆ ಒಪ್ಪಿಸಿದ ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ಜಪ್ಪಿನಮೊಗರಿನ ದಾರುಲ್ ಐಮಾನ್ ಮದ್ರಸ ಕೃತಜ್ಞತೆ ಸಲ್ಲಿಸಿದೆ.

ದುಬೈಯಿಂದ ಆಗಮಿಸಿದ್ದ ಮೂಲತಃ ಕಾಸರಗೋಡಿನ ನಿವಾಸಿ ಪ್ರಸ್ತುತ ಪಾಂಡೇಶ್ವರದಲ್ಲಿ ವಾಸವಾಗಿರುವ ತೆರುವತ್ ಅಬ್ದುಲ್ಲ ಹಸೈನಾರ್ ಅವರು ಶುಕ್ರವಾರ ಸಂಜೆ ಸುಮಾರು 5:30ಕ್ಕೆ ಪಾಂಡೇಶ್ವರದಿಂದ ಆಟೊವೊಂದನ್ನು ಹತ್ತಿ ದಾರುಲ್ ಐಮಾನ್ ಮದ್ರಸಕ್ಕೆ ಭೇಟಿ ನೀಡಲೆಂದು ಜಪ್ಪಿನಮೊಗರಿಗೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಅವರು ಕೆಲವು ದಾಖಲೆ ಪತ್ರ, ಪಾಸ್‌ಪೋರ್ಟ್, ನಗದು ಹೊಂದಿದ್ದ ಬ್ಯಾಗ್‌ವೊಂದನ್ನು ಆಟೊದಲ್ಲೇ ಮರೆತು ಬಿಟ್ಟಿದ್ದರು. ಮಾ.13ರಂದು ಅವರು ದುಬೈಗೆ ತೆರಳಬೇಕಾಗಿರುವುದರಿಂದ ಪಾಸ್‌ಪೋರ್ಟ್‌ನ ಅಗತ್ಯ ಇತ್ತು. ವಿವಿಧೆಡೆ ಆಟೊವನ್ನು ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಈ ಬಗ್ಗೆ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಘ ಟನೆಯ ಮರುದಿನ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ರಿಕ್ಷಾ ಚಾಲಕನೇ ದಾರುಲ್ ಐಮಾನ್ ಮದ್ರಸಕ್ಕೆ ಬಂದು ಪ್ರಯಾಣಿಕರೊಬ್ಬರು ಮರೆತಿದ್ದ ಬ್ಯಾಗನ್ನು ಅವರಿಗೆ ಒಪ್ಪಿಸುವಂತೆ ತಂದು ಕೊಟ್ಟಿದ್ದಾರೆ. ಮದ್ರಸದವರು ಕೂಡಲೇ ಅಬ್ದುಲ್ಲ ಹಸೈನಾರ್‌ರನ್ನು ಸಂಪರ್ಕಿಸಿ ನೀವು ಮರೆತಿದ್ದ ಬ್ಯಾಗನ್ನು ರಿಕ್ಷಾ ಚಾಲಕರು ತಂದು ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಸಂತುಷ್ಟಗೊಂಡ ಅವರು ಕೂಡಲೇ ಮದ್ರಸಕ್ಕೆ ಬಂದು ಬ್ಯಾಗನ್ನು ಪಡೆದುಕೊಂಡರಲ್ಲದೆ, ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕನನ್ನು ಪುರಸ್ಕರಿಸುವಂತೆ ಮದ್ರಸದ ಸಿಬ್ಬಂದಿಯವರಲ್ಲಿ ಕಾಣಿಕೆಯೊಂದನ್ನು ಕೊಟ್ಟಿದ್ದಾರೆ. ಆದರೆ ರಿಕ್ಷಾ ಚಾಲಕನ ಮಾಹಿತಿಯನ್ನು ಮದ್ರಸದವರು ಪಡೆಯದೇ ಇದ್ದುದರಿಂದ ಅವರು ಶನಿವಾರ ಸಂಜೆ ‘ವಾರ್ತಾಭಾರತಿ’ಯನ್ನು ಸಂಪರ್ಕಿಸಿ, ಬ್ಯಾಗನ್ನು ಒಪ್ಪಿಸಿರುವ ರಿಕ್ಷಾ ಚಾಲಕರು ಮಾಲಕ ನೀಡಿದ್ದ ಪುರಸ್ಕಾರವನ್ನು ಮದ್ರಸಕ್ಕೆ ಬಂದು ಸ್ವೀಕರಿಸಬೇಕೆಂದು ಮದ್ರಸದವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಿಬ್ಬಂದಿ ಮುಹಮ್ಮದ್ ಹುಸೈನ್ (ಮೊಬೈಲ್ ಸಂಖ್ಯೆ 9980313018)ರನ್ನು ಸಂಪರ್ಕಿಸುವಂತೆ ಸಂಸ್ಥೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News