×
Ad

ನನ್ನನ್ನು ಮೋದಿಯ ಚಮಚಾ ಎಂದರೆ ಬೇಸರವಿಲ್ಲ: ಖೇರ್

Update: 2016-03-12 23:38 IST

ಹೊಸದಿಲ್ಲಿ, ಮಾ.12: ತನ್ನನ್ನು ದೇಶಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ‘ಚಮಚಾ’ ಎಂದು ಕರೆಯುತ್ತಿರುವುದಕ್ಕೆ ಬೇಸರವಿಲ್ಲ ಎಂದು ನಟ ಅನುಪಮ್ ಖೇರ್ ಹೇಳಿದ್ದು, ಪ್ರಧಾನಿಯೊಬ್ಬರನ್ನು ಮೆಚ್ಚಿ ಮಕ್ಕಳು ಯಾಕೆ ಘೋಷಣೆಗಳನ್ನು ಕೂಗಬಾರದೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
 ನಮ್ಮ ಮಕ್ಕಳು ಶಾಲೆಯಲ್ಲಿ ನಮ್ಮ ಪ್ರಧಾನಿಯನ್ನು ಮೆಚ್ಚಿ ಘೋಷಣೆಗಳನ್ನು ಯಾಕೆ ಕೂಗಬಾರದು? ಚಿಕ್ಕವರಿರುವಾಗ ನಾವು ಶಾಲೆಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪರ ಘೋಷಣೆ ಕೂಗುತ್ತಿದ್ದೆವು. ಅದರಲ್ಲೇನು ಸಮಸ್ಯೆ ಎಂದವರು ಪ್ರಶ್ನಿಸಿದ್ದಾರೆ.
ದಿನ-ರಾತ್ರಿ ಸತತವಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು (ಮೋದಿ) ಇಲ್ಲಿದ್ದಾರೆ. ಅವರು ನಮ್ಮ ದೇಶದ ವರ್ಚಸ್ಸನ್ನು ವಿಶ್ವಾದ್ಯಂತ ಹೆಚ್ಚಿಸಿದ್ದಾರೆ. ಆದರೆ, ಟೀಕಾಕಾರರು ಅವರ ಪ್ರತಿಯೊಂದು ಕೆಲಸದಲ್ಲೂ ಕೊರತೆ ಹುಡುಕುತ್ತಿದ್ದಾರೆ ಹಾಗೂ ಕೆಳಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಎಂದು ಖೇರ್, ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾರ ‘ಆಪ್ ಕೀ ಅದಾಲತ್’ನಲ್ಲಿ ಹೇಳಿದ್ದಾರೆ.
ಮೋದಿ ಸದಾ ದೇಶದ ಕುರಿತೇ ಮಾತನಾಡುತ್ತಾರೆ. ಅವರಿಗಿಂತ ಮೊದಲಿನ ಯಾವನೇ ಪ್ರಧಾನಿಯೂ, ಕೆಂಪು ಕೋಟೆಯ ಮೇಲಿನಿಂದ ಮಹಿಳೆಯರ ಶೌಚಾಲಯದ ಬಗ್ಗೆ ಮಾತನಾಡಿಲ್ಲವೆಂದು ಅವರು ತಿಳಿಸಿದ್ದಾರೆ.
ಟೀಕಾಕಾರರು ಅವರನ್ನು ಮೋದಿಯ ಚಮಚಾ ಎನ್ನುತ್ತಿರುವ ಬಗೆ ಪ್ರತಿಕ್ರಿಯಿಸಿದ ಖೇರ್, ತಾನು ಯಾರೋ ಇತರರ ಹಿಂಬಾಲಕನೆನಿಸಿಕೊಳ್ಳುವುದಕ್ಕಿಂತ ಮೋದಿಯವರ ಚಮಚಾ ಎನಿಸಿಕೊಳ್ಳುವುದೇ ಉತ್ತಮವೆಂದು ಭಾವಿಸುತ್ತೇನೆ. ತಾನು ವಿರೋಧಿಸಬೇಕೆಂದು ಈ ರೀತಿ ಹೇಳುತ್ತಿದ್ದಾರೆ. ತಾನು ನಟರಾದ ದಿಲೀಪ್ ಕುಮಾರ್ ಹಾಗೂ ಅಮಿತಾಭ್ ಬಚ್ಚನ್‌ರ ‘ಚಮಚಾ’ ಸಹ ಆಗಿದ್ದೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News