×
Ad

ಯೆಮನ್ ಘರ್ಷಣೆಗಳಲ್ಲಿ 100ಕ್ಕೂ ಅಧಿಕ ಜನರ ಸಾವು

Update: 2016-03-12 23:40 IST

ಸನಾ,ಮಾ.12: ಯೆಮ್ನ ಮೂರನೆ ಅತೀದೊಡ್ಡ ನಗರವಾಗಿರುವ ತಾಯಿಝ್ ನಗರದ ಕೆಲವು ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಹೌದಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಶುಕ್ರವಾರ ಸಂಭವಿಸಿದ ಘರ್ಷಣೆಗಳಲ್ಲಿ 100ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದಾರೆ.
 ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲಿಹ್ ಅವರಿಗೆ ನಿಷ್ಠರಾಗಿರುವ ಶಿಯಾ ಹೌದಿ ಬಂಡುಕೋರರು ಮತ್ತು ಅವರ ಸಹಚರರನ್ನು ಮಣಿಸಿ, ತಾಯಿಝ್ ನಗರದ ನೈಋತ್ಯ ಪ್ರದೇಶಗಳನ್ನು ಅವರ ಹಿಡಿತದಿಂದ ಮುಕ್ತಗೊಳಿಸಿದ್ದೇವೆ ಎಂದು ಸೇನೆಯು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಸೌದಿ ಅರೇಬಿಯಾ ನೇತೃತ್ವದ ವಾಯುದಾಳಿಗಳಲ್ಲಿ ಸತ್ತವರಲ್ಲಿ ಹೆಚ್ಚಿನವರು ಬಂಡುಕೋರರಾಗಿದ್ದಾರೆ. ಕೆಲವು ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಘರ್ಷಣೆಗಳು ಆರಂಭಗೊಂಡಿದ್ದು,ತಾಯಿಜ್‌ನ ಅಲ್‌ಮಿಸ್ರಾಖ್ ಮತ್ತು ಅಲಕ್ರೌಧ್ ಜಿಲ್ಲೆಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈಗ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದು ಮಾನವೀಯ ನೆರವು ಸಾಮಗ್ರಿಗಳ ನಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
 ರಿಪಬ್ಲಿಕನ್ ಪ್ಯಾಲೇಸ್,ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬಂಡುಕೋರರ ಹಿಡಿತದಲ್ಲಿರುವ ಇತರ ಪ್ರದೇಶಗಳನ್ನೂ ಮುಕ್ತಗೊಳಿಸಲು ಸೇನೆಯು ಈಗ ಕಾರ್ಯಾಚರಣೆ ರೂಪಿಸುತ್ತಿದೆ.
ಹೌದಿ ಗುಂಪಿನಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲವಾದರೂ ಈ ಹಿಂದೆಗೆತ ‘ಯುದ್ಧತಂತ್ರ’ವಾಗಿದೆ ಎಂದು ಬಂಡುಕೋರರ ಪರ ಕಾರ್ಯಕರ್ತರು ಹೇಳಿದ್ದಾರೆ. ಬಂಡುಕೋರರ ವಶದಲ್ಲಿರುವ ರಾಜಧಾನಿ ಸನಾ ಮತ್ತು ಬಂದರು ನಗರ ಏಡನ್ ನಡುವಿನಲ್ಲಿರುವ ತಾಯಿಝ್ ನಗರವನ್ನು ಸೌದಿ ನೇತೃತ್ವದ ಪಡೆಗಳು ಜುಲೈ 2015ರಲ್ಲಿ ಮರು ವಶಪಡಿಸಿಕೊಂಡ ಬಳಿಕ ಅದು ಯೆಮೆನ್‌ನ ಹಂಗಾಮಿ ರಾಜಧಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News