ಕೆಟ್ಟ ಸಾಲಗಳ ಉತ್ಪ್ರೇಕ್ಷೆ ಬೇಡ: ಜೇಟ್ಲಿ
ಹೊಸದಿಲ್ಲಿ,ಮಾ.12: ಮದ್ಯದ ದೊರೆ ವಿಜಯ ಮಲ್ಯ ಅವರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಪಂಗನಾಮ ಹಾಕಿರುವುದಕ್ಕೆ ರಾಷ್ಟ್ರಾದ್ಯಂತ ವ್ಯಕ್ತವಾಗಿರುವ ಆಕ್ರೋಶ,ಟೀಕೆಗಳ ನಡುವೆಯೇ ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಕೆಟ್ಟ ಸಾಲಗಳ ಬಗ್ಗೆ ಉತ್ಪ್ರೇಕ್ಷೆ ಸಲ್ಲದು, ಅದರಿಂದಾಗಿ ಇಡೀ ಸಾಲ ಕಾರ್ಯಾಚರಣೆಗಳು ಮತ್ತು ಪ್ರಗತಿಗೆ ಅಡ್ಡಿಯುಂಟಾಗುತ್ತದೆ ಎಂದು ಶನಿವಾರ ಇಲ್ಲಿ ಎಚ್ಚರಿಕೆ ನೀಡಿದರು.
ಆದರೆ, ವ್ಯಕ್ತಿಗತ ದುರ್ನಡತೆಗಳನ್ನು ಪ್ರತ್ಯೇಕವಾಗಿ ನೋಡಲಾಗು ವುದು ಎಂದು ಜೇಟ್ಲಿ ಹೇಳಿದರು.
ಜೇಟ್ಲಿ ಮತ್ತು ರಾಜನ್ ಇಲ್ಲಿ ಆರ್‌ಬಿಐ ಆಡಳಿತ ಮಂಡಳಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ನಾವು ಮುನ್ನಡೆಯುವಾಗ ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಕ್ರಿಮಿನಲ್ ಕೃತ್ಯಗಳಿಗೆ ದಂಡನೆಯಾಗಬೇಕು ನಿಜ, ಆದರೆ ಸಾಲಗಳನ್ನು ನೀಡಲು ಬ್ಯಾಂಕುಗಳು ಹಿಂಜರಿಯುವಂತಹ ಸ್ಥಿತಿಯೂ ನಿರ್ಮಾಣ ವಾಗಬಾರದು. ಇಲ್ಲದಿದ್ದರೆ ಅದು ಸಾಲ ವಸೂಲಾತಿ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಹೂಡಿಕೆ ಪ್ರಕ್ರಿಯೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದ ರಾಜನ್, ಹೀಗಾಗಿ ಒಂದು ದೇಶ ಮತ್ತು ಒಂದು ವ್ಯವಸ್ಥೆಯಾಗಿ ನಾವು ಅತ್ಯಂತ ಎಚ್ಚರಿಕೆಯಿಂದ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ ಹಾಗೂ ನಾವು ಅದನ್ನು ಸಾಧಿಸುತ್ತೇವೆ ಎಂಬ ಆಶಯ ಹೊಂದಿದ್ದೇವೆ ಎಂದು ಹೇಳಿದರು.