×
Ad

ದೇಶವು ಆಪತ್ತಿನ ಸ್ಥಿತಿಯಲ್ಲಿ ಸಾಗುತ್ತಿದೆ: ಸೋನಿಯಾ

Update: 2016-03-12 23:43 IST

ಹೊಸದಿಲ್ಲಿ, ಮಾ.12: ದೇಶವೀಗ ಆಪತ್ತಿನ ಸ್ಥಿತಿಯೊಂದರಲ್ಲಿ ಸಾಗುತ್ತಿದೆ. ಆಡಳಿತ ನಡೆಸುತ್ತಿರುವವರು ಜಾತ್ಯತೀತತೆಯನ್ನು ಗುರಿಯಿರಿಸಿ ದ್ವೇಷವನ್ನು ಹರಡುತ್ತಿದ್ದಾರೆ. ಅದರ ವಿರುದ್ಧ ಹೋರಾಡಲು ವಿವಿಧ ಹಿನ್ನೆಲೆಗಳ ಜನರನ್ನು ಒಟ್ಟಿಗೆ ತರುವುದು ಅಗತ್ಯವೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಮೀಯತ್ ಉಲಮಾ-ಇ-ಹಿಂದ್ ಇಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಸಮಗ್ರತಾ ಸಮ್ಮೇಳನ’ದಲ್ಲಿ ಭಾಗವಹಿಸಿದ್ದವರಿಗೆ ಕಳುಹಿಸಿದ ಲಿಖಿತ ಸಂದೇಶದಲ್ಲಿ ಅವರು ಈ ಟೀಕೆ ಮಾಡಿದ್ದಾರೆ.

ದೇಶವು ಸಂದಿಗ್ಧ ಸ್ಥಿತಿಯೊಂದರಲ್ಲಿ ಸಾಗುತ್ತಿದೆಯೆಂಬುದು ತಮಗೆ ಗೊತ್ತಿದೆ. ಅಳುವವವರು ದೇಶಾದ್ಯಂತ ದ್ವೇಷವನ್ನು ಹರಡುತ್ತಿದ್ದಾರೆ. ಮುಖ್ಯವಾಗಿ ಜಾತ್ಯತೀತತೆಯನ್ನು ಗುರಿಯಿರಿಸಲಾಗಿದೆ. ಇದು ಕಳವಳದ ಸಂಗತಿಯಾಗಿದೆ ಎಂದು ಸೋನಿಯಾ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಜಾತಿ, ಮತ, ಬಣ್ಣ ಮತ್ತು ಜನಾಂಗ ವನ್ನು ಮರೆತು ಜನರನ್ನು ಒಂದುಗೂಡಿಸುವ ಕೆಲಸ ಮುಖ್ಯವಾಗಿದೆಯೆಂದು ಸೋನಿಯಾರ ಸಂದೇಶವನ್ನುಲ್ಲೇಖಿಸಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ತಿಳಿಸಿದ್ದಾರೆ.

ಈ ದಿಸೆಯಲ್ಲಿ ಜಮೀಯತ್ ಉಲಮಾ-ಇ-ಹಿಂದ್‌ನ ಪಾತ್ರವನ್ನು ಶ್ಲಾಘಿಸಿರುವ ಸೋನಿಯಾ, ಕಾಂಗ್ರೆಸ್‌ನೊಂದಿಗೆ ಅದು ದೇಶದ ಸ್ವಾತಂತ್ರ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಹೊಗಳಿದ್ದಾರೆ.

ಹಾಲಿ ಪರಿಸ್ಥಿತಿಯಲ್ಲಿ ಜಮೀಯತ್ ಪುನಃ ಪ್ರಮುಖ ಹೆಜ್ಜೆಯೊಂದನ್ನಿರಿಸಿದೆ. ದೇಶದ ಏಕತೆ ಹಾಗೂ ಸಮಗ್ರತೆಗಾಗಿ ತೆಗೆದುಕೊಂಡ ಈ ಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಹಾಗೂ ಅದರ ಪ್ರಯತ್ನ ಉತ್ತಮ ಫಲಿತಾಂಶ ತರಲೆಂದು ಆಶಿಸುತ್ತೇನೆಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಆಝಾದ್ ಅಲ್ಲದೆ, ಮಣಿ ಶಂಕರ ಅಯ್ಯರ್, ಜಮೀಯತ್‌ನ ಅಧ್ಯಕ್ಷ ಸೈಯದ್ ಅರ್ಶದ್ ಮದನಿ, ಮುಸ್ಲಿಮ್ ವಿದ್ವಾಂಸರು, ಕ್ರೈಸ್ತ, ಬೌದ್ಧ ಹಾಗೂ ಸಿಖ್ ಸಮುದಾಯಗಳ ನಾಯಕರು ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News