ಉಡುಪಿ: ಕಾರ್ಪ್ ಬ್ಯಾಂಕ್‌ನ 111ನೆ ಸ್ಥಾಪನಾ ದಿನಾಚರಣೆ

Update: 2016-03-12 18:17 GMT

ಉಡುಪಿ, ಮಾ.12: ನಗರದ ಪ್ರತಿಷ್ಠಿತ ಹಾಗೂ ಜನಪ್ರಿಯ ಸಾಮಾಜಿಕ ಮುಂದಾಳುವಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು 1906 ಮಾ.12ರಂದು ಕೇವಲ 5,000 ರೂ. ಬಂಡವಾಳದೊಂದಿಗೆ ಪ್ರಾರಂಭಿಸಿದ ಕಾರ್ಪೊರೇಶನ್ ಬ್ಯಾಂಕ್, ಇಂದು 2.41 ಲಕ್ಷ ಕೋ.ರೂ. ಠೇವಣಿ ಹಾಗೂ 3.41 ಲಕ್ಷ ಕೋಟಿ ರೂ. ವ್ಯವಹಾರದ ಬ್ಯಾಂಕ್ ಆಗಿ ಅಭಿವೃದ್ಧಿ ಹೊಂದಿದೆ., ಗ್ರಾಹಕರ ದೃಷ್ಟಿಯಲ್ಲಿ ‘ಅದೃಷ್ಟದ ಬ್ಯಾಂಕ್’ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಕಾರ್ಪೊರೇಷನ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಜೈಕುಮಾರ್ ಗರ್ಗ್ ಹೇಳಿದ್ದಾರೆ.

ಉಡುಪಿಯ ಸ್ಥಾಪಕರ ಶಾಖೆಯಲ್ಲಿರುವ ಹಾಜಿ ಅಬ್ದುಲ್ಲಾ ಸಾಹೇಬರ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ಬ್ಯಾಂಕ್‌ನ 111ನೆ ಸ್ಥಾಪನಾ ದಿನಾಚರಣೆ ಹಾಗೂ ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರ್ಪೊರೇಷನ್ ಬ್ಯಾಂಕ್ ಗ್ರಾಹಕರ ಸೇವೆಗೆ ಪ್ರಥಮ ಆದ್ಯತೆಯನ್ನು ನೀಡುತ್ತಿದ್ದು, ದೇಶದ ಬ್ಯಾಂಕ್‌ಗಳಲ್ಲಿ ಮೂರನೆ ಸ್ಥಾನದಲ್ಲಿದೆ. ಆದ್ದರಿಂದಲೇ ಗ್ರಾಹಕರು ಇದನ್ನು ತಮ್ಮ ‘ಅದೃಷ್ಟದ ಬ್ಯಾಂಕ್’ ಎಂದು ಪರಿಗಣಿಸುತ್ತಾರೆ ಎಂದರು.

ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮೆಹ್ತಾ, ನಿರ್ದೇಶಕ ಅದೀಶ್ ಕುಮಾರ್ ಜೈನ್, ಜನರಲ್ ಮ್ಯಾನೇಜರ್ ಲಕ್ಷ್ಮೀನಾಥ್ ರೆಡ್ಡಿ ಉಪಸ್ಥಿತರಿದ್ದರು. ಬ್ಯಾಂಕ್‌ನ ಗ್ರಾಹಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.

ಕಾರ್ಪ್ ಬ್ಯಾಂಕ್ ಸ್ಥಾಪಕರ ಶಾಖೆಯ ಮುಖ್ಯ ಪ್ರಬಂಧಕ ಮಹೇಶ್ ಅತಿಥಿಗಳನ್ನು ಸ್ವಾಗತಿಸಿದರು. ವಲಯ ಮುಖ್ಯಸ್ಥ ಹಾಗೂ ಸಹಾಯಕ ಮಹಾ ಪ್ರಬಂಧಕ ಡಾ.ವಿ.ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹೆರಾಲ್ಡ್ ಡಿಸೋಜ ವಂದಿಸಿ ದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News