‘ಪಶ್ಚಿಮಘಟ್ಟಗಳನ್ನು ಬೃಹತ್ ಯೋಜನೆಗಳಿಂದ ರಕ್ಷಿಸಿ’

Update: 2016-03-12 18:18 GMT

ಉಡುಪಿ, ಮಾ.12: ಅಪಾರ ಸಸ್ಯ ಸಂಪತ್ತು, ಜೀವವೈವಿಧ್ಯಗಳನ್ನು ಹೊಂದಿ ರುವ ಪಶ್ಚಿಮ ಘಟ್ಟ ನಮ್ಮ ದೇಶದ ಸಂಪತ್ತು. ಬೃಹತ್ ಯೋಜನೆಗಳಿಂದ ಇದಕ್ಕೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ. ಆ ಸಂಪತ್ತನ್ನು ಉಪಯೋಗಿಸಬೇಕೇ ಹೊರತು ದುರುಪಯೋಗಪಡಿಸಬಾರದು ಎಂದು ಮೈಸೂರು ವಿವಿಯ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಆರ್. ನಾಗೇಂದ್ರನ್ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿವಿಯ ಸಸ್ಯಶಾಸ್ತ್ರ ಉಪನ್ಯಾಸಕರ ಸಂಘ ವನಶ್ರೀಯ ಜಂಟಿ ಆಶ್ರಯದಲ್ಲಿ ಶನಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ‘ಟೆರಿಡೋ ಫೈಟ್ಸ್ ಆಫ್ ಕರ್ನಾಟಕ’(ಕರ್ನಾಟಕದ ಜರೀ ಸಸ್ಯಗಳು) ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಗ್ರಂಥಕರ್ತ ಎಂಜಿಎಂ ಕಾಲೇ ಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಗೋಪಾಲ್ ಮಾತನಾಡಿ, ಸುಮಾರು ಏಳು ವರ್ಷಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿ 30 ಜರೀ ಸಸ್ಯ ಕುಟುಂಬಗಳಿಗೆ ಸೇರಿದ 71 ಜಾತಿಯ, 183 ಜರೀ ಪ್ರಭೇದಗಳನ್ನು ಗುರುತಿಸಿ ಈ ಗ್ರಂಥದಲ್ಲಿ ಅದರ ಕುರಿತು ಮಾಹಿತಿ ನೀಡಲಾಗಿದೆ ಎಂದವರು ವಿವರಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕೆ.ಕುಸುಮಾ ಕಾಮತ್ ವಹಿಸಿದ್ದರು. ಉಡುಪಿ ಪಿಪಿಸಿಯ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಗೋಪಾಲಕೃಷ್ಣ ಭಟ್ ಉಪ ಸ್ಥಿತರಿದ್ದರು. ವನಶ್ರೀ ಅಧ್ಯಕ್ಷ ಕೆ.ಎನ್. ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಉಷಾರಾಣಿ ಎಸ್. ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಶೋಭಾ ವಂದಿಸಿದರು. ಉಪನ್ಯಾಸಕಿ ಸುಪ್ರೀತಾ ಎಂ.ರಾವ್ ಕಾರ್ಯಕ್ರಮ ನಿರೂಪಿಸಿದರು.

ಜಗತ್ತಿನಲ್ಲಿ ಸುಮಾರು 7-8 ಮಿಲಿಯನ್ ಸಸ್ಯ ಪ್ರಭೇದಗಳಿರುವುದಾಗಿ ಅಂದಾಜಿಸಲಾಗಿದ್ದು, ಅದರಲ್ಲಿ ಶೇ.20ರಷ್ಟು ಮಾತ್ರ ಗುರುತಿಸಲಾಗಿದೆ. ಅದೇ ರೀತಿ ಜಗತ್ತಿನಾದ್ಯಂತ ಸುಮಾರು 12,000, ಭಾರತದಲ್ಲಿ 1,000 ಹಾಗೂ ಕರ್ನಾಟಕದಲ್ಲಿ 183 ಜರೀ ಸಸ್ಯ ಪ್ರಭೇದಗಳಿವೆ. ಪಶ್ಚಿಮಘಟ್ಟ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಜರೀ ಸಸ್ಯಗಳು ಕಂಡುಬರುತ್ತವೆ.
              -ಡಾ.ಪಿ.ಕೆ.ರಾಜಗೋಪಾಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News