ಸೌದಿ: ಐದಕ್ಕಿಂತ ಕಡಿಮೆ ಕುಟುಂಬ ಸದಸ್ಯರಿರುವ ವಿದೇಶಿ ನಿವಾಸಿಗಳಿಗೆ ದೊಡ್ಡ ವಾಹನಗಳ ಮಾಲಕತ್ವವಿಲ್ಲ
ಜಿದ್ದಾ: ಸೌದಿ ಅರೇಬಿಯಾದಲ್ಲಿ ವಿದೇಶಿಯರ ಮೇಲಿನ ನಿರ್ಬಂಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ನಡುವೆ ಶನಿವಾರ ಹೊಸತೊಂದು ನಿರ್ಬಂಧವನ್ನು ಹೇರಲಾಗಿದೆ. ಇದರ ಪ್ರಕಾರ ಸೌದಿ ಅರೇಬಿಯಾದಲ್ಲಿರುವ ಐದಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ವಿದೇಶಿ ನಿವಾಸಿಗಳು ಏಳು ಅಥವಾ ಅದಕ್ಕಿಂತ ಹೆಚ್ಚು ಸೀಟುಗಳ ದೊಡ್ಡ ವಾಹನವನ್ನು ಖರೀದಿಸುವಂತಿಲ್ಲ ಹಾಗೂ ಅದರ ಮಾಲಕತ್ವ ಪಡೆಯುವಂತಿಲ್ಲ ಎಂದು ಟ್ರಾಫಿಕ್ ವಿಭಾಗದ ಮಹಾ ನಿರ್ದೇಶಕ ತಿಳಿಸಿದ್ದಾರೆ.
ಈ ಸಂಬಂಧ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಕಳಿಸಿರುವ ಮಹಾನಿರ್ದೇಶಕ, ಮೇಲೆ ತಿಳಿಸಿದ ನಿಯಮ ಪಾಲಿಸದಿದ್ದ ಕುಟುಂಬಗಳಿಗೆ ದೊಡ್ಡ ವಾಹನಗಳ ಮಾಲಕತ್ವ ನೋಂದಣಿ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಐದು ಅಥವಾ ಅದಕ್ಕಿಂತ ಹೆಚ್ಚು ಕುಟುಂಬ ಸದಸ್ಯರಿರುವ ನಿವಾಸಿಗಳು ಈ ಸಂಬಂಧ ಸರಿಯಾದ ದಾಖಲೆ ಪತ್ರಗಳನ್ನು ಒದಗಿಸಿ ತಾವು ತಮ್ಮ ವಾಹನದಲ್ಲಿ ಕಾನೂನು ಬಾಹಿರವಾಗಿ ಜನರ ಸಾಗಣೆ ಮಾಡುವುದಿಲ್ಲ ಎಂದು ಒಪ್ಪಿಗೆ ನೀಡಿದ್ದಲ್ಲಿ ಮಾತ್ರ ಅವರಿಗೆ ದೊಡ್ಡ ವಾಹನಗಳ ಮಾಲಕತ್ವ ನೋಂದಣಿ ಮಾಡಬಹುದು ಎಂದು ತಿಳಿಸಿದ್ದಾರೆ.
ಸೌದಿಯಲ್ಲಿರುವ ಕೆಲವು ವಿದೇಶಿ ನಿವಾಸಿಗಳು ದೊಡ್ಡ ವಾಹನಗಳನ್ನು ಖರೀದಿಸಿ ಅವುಗಳಲ್ಲಿ ಶಾಲಾ ಮಕ್ಕಳನ್ನು ಅಥವಾ ಇತರರನ್ನು ಕಾನೂನುಬಾಹಿರವಾಗಿ ಸಾಗಣೆ ಮಾಡಿ ಆದಾಯ ಗಳಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿದ್ದಾ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವಾಹನಗಳ ಸಮಿತಿಯ ಅಧ್ಯಕ್ಷ ಒವೈದಿ ಕಿಷಿ ತಿಳಿಸಿದ್ದಾರೆ.