ದೈವಿಕ ಶಕ್ತಿಯ ಭ್ರಮೆಯಲ್ಲಿ ಸಿಂಹಗಳೊಂದಿಗೆ ಕಾದಾಡಿ ಪೃಷ್ಠ ಕಳೆದುಕೊಂಡ ಮತ ಪ್ರಚಾರಕ

Update: 2016-03-13 10:05 GMT
ಸಾಂದರ್ಭಿಕ ಚಿತ್ರ

ಕೇಪ್‌ಟೌನ್‌, ಮಾ. 13: ಕ್ರೈಸ್ತ ಧರ್ಮಕ್ಕೆ ಸೇರಿದ ಪಂಗಡವೊಂದರ ಮತ ಪ್ರಚಾರಕನೊಬ್ಬ ತನ್ನೊಳಗೆ ದೈವಿಕ ಶಕ್ತಿ ಬಂದಿದೆ ಎಂಬ ಭ್ರಮೆಯಲ್ಲಿ ಸಿಂಹದೊಂದಿಗೆ ಕಾದಾಡಲು ಹೋಗಿ ತನ್ನ ಪೃಷ್ಠವನ್ನು ಕಳೆದುಕೊಂಡ ಚಿಂತಾಜನಕ ಘಟನೆ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನವೊಂದರಲ್ಲಿ ನಡೆದಿದೆ.
 ಪ್ರಿಟೋರಿಯಾ ನಿವಾಸಿ, ಝಿಯೋನ್ ಕ್ರಿಶ್ಚಿಯನ್ ಚರ್ಚ್‌ನ ಪ್ರವಾದಿ ಎಂದು ಹೇಳಿಕೊಳ್ಳುವ ಪ್ರಚಾರಕ ಅಲೆಕ್ ಇವಾನ್, ಕ್ರುಗರ್ ನ್ಯಾಶನಲ್ ಪಾರ್ಕ್‌ಗೆ ತನ್ನ ಪಂಗಡದ ಇತರ ಸದಸ್ಯರೊಂದಿಗೆ ಭೇಟಿ ನೀಡಿದ್ದರು. ಅಲ್ಲಿ ವಿವಿಧ ಕಾಡು ಪ್ರಾಣಿಗಳನ್ನು ಈ ಗುಂಪು ನಿಂತು ನೋಡುತ್ತಿತ್ತು. ಆಗ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲಾರಂಭಿಸಿದ ಅಲೆಕ್ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ತೊಡಗಿದರು. ಬಳಿಕ ತನ್ನೊಳಗೆ ದೈವಿಕ ಶಕ್ತಿ ಬಂದಿದೆ ಎಂದು ಹೇಳಿಕೊಂಡ ಅಲೆಕ್ ತಾನಿದ್ದ ಸುರಕ್ಷಿತ ಕಾರಿನ ಬಾಗಿಲನ್ನು ತೆಗೆದು ಅಲ್ಲಿದ್ದ ಸಿಂಹಗಳತ್ತ ಧಾವಿಸಿದರು. ಬೇಟೆಯ ಪ್ರಾಣಿಗಳನ್ನು ತಿನ್ನುತ್ತಿದ್ದ ಸಿಂಹಗಳು ಇದ್ದಕ್ಕಿದ್ದಂತೆ ತಮ್ಮ ಎದುರಿಗೆ ಬಂದ ಈ ವ್ಯಕ್ತಿಯನ್ನು ನೋಡಿ ಈತನ ಮೇಲೆರಗಿದವು. ತಕ್ಷಣ ಎಚ್ಚೆತ್ತುಕೊಂಡ ಅಲೆಕ್ ಅಪಾಯದ ಅರಿವಾಗಿ ಕಾರಿನ ಓಡತೊಡಗಿದರು. ಆದರೆ ಆತನಿಗಿಂತ ವೇಗವಾಗಿ ಬಂದ ಸಿಂಹಗಳು ಆತನನ್ನು ಹಿಡಿದುಕೊಂಡುಬಿಟ್ಟವು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ರೇಂಜರ್ ಗಾಳಿಯಲ್ಲಿ ಗುಂಡು ಹಾರಿಸಿ ಸಿಂಹಗಳನ್ನು ಚದುರಿಸಿ ಅಲೆಕ್‌ನನ್ನು ರಕ್ಷಿಸಿದರು. ಆದರೆ ಅಷ್ಟರಲ್ಲಾಗಲೇ ಅಲೆಕ್ ಪೃಷ್ಠದ ಭಾಗಗಳು ಸಿಂಹಗಳ ಪಾಲಾಗಿದ್ದವು. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ತನಗೆ ಆಗ ಏನಾಯಿತೆಂದೇ ಗೊತ್ತಿಲ್ಲ ಎಂದು ಅಲೆಕ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News