ಸಾಮಾಜಿಕ ಜಾಲತಾಣಗಳಲ್ಲಿ ದಲಿತ ನಿಂದನೆ ಬಗ್ಗೆ ಕಠಿಣ ಕ್ರಮಕ್ಕೆ ಆಗ್ರಹ

Update: 2016-03-13 12:43 GMT

ಮಂಗಳೂರು, ಮಾ.13: ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ದಲಿತ ಯುವಕರನ್ನು ಹೀನವಾಗಿ ಚಿತ್ರಿಸಿ ತೋರಿಸಲಾಗುತ್ತಿದ್ದು, ಇದರ ವಿರುದ್ದ ಕಠಿಣ ಕ್ರಮ ್ನ ತೆಗೆದುಕೊಳ್ಳಬೇಕೆಂದು ಇಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಮಿಷನರೇಟ್ ವ್ಯಾಪ್ತಿಯ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದರು.
   ಡಿಸಿಪಿ ಕೆ.ಎಂ.ಶಾಂತರಾಜು ನೇತೃತ್ವದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ರಘುವೀರ್, ದಲಿತ ಯುವಕರನ್ನು ನಿಂದಿಸುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಹೀನವಾಗಿ ಕೆಲವೊಂದು ಸಂದೇಶಗಳು ಹರಿದಾಡುತ್ತಿವೆ. ದಲಿತರು ಸಮಾನತೆ ಬಯಸುತ್ತಿದ್ದರೆ ಮತ್ತೊಂದೆಡೆ ದಲಿತರನ್ನು ಈ ರೀತಿಯಾಗಿ ನೋಡಲಾಗುತ್ತಿದೆ. ಇದರಿಂದ ದಲಿತ ಯುವಕರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಆರೋಪಿಸಿದರು.
   ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಕೆ.ಎಂ.ಶಾಂತರಾಜು, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ನಿಂದಿಸಿ ಹಾಕುವುದು ಅಪರಾಧವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ ಕಾನೂನುತಜ್ಞರ ಸಲಹೆಯನ್ನು ಪಡೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
    ಸಂಚಾರ ಪೊಲೀಸರು ಸಣ್ಣ ವಾಹನಗಳಿಗೊಂದು, ದೊಡ್ಡ ವಾಹನಗಳಿಗೊಂದು ಕಾನೂನನ್ನು ಮಾಡುತ್ತಿದ್ದಾರೆ. ದೊಡ್ಡ ವಾಹನಗಳಿಗೆ ಯಾವುದೆ ರೀತಿಯ ತಪಾಸಣೆ ಮಾಡದೆ ಕೇವಲ ಸಣ್ಣ ವಾಹನಗಳನ್ನು ಮಾತ್ರ ಪರೀಕ್ಷಿಸುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ತಿರುಗಾಡುವವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹೆಲ್ಮೆಟ್ ಕಸಿದುಕೊಂಡು ನನ್ನ ಮೇಲೆಯೆ ಐದಾರು ಕೇಸಗಳನ್ನು ಹಾಕುವ ಬೆದರಿಕೆಯನ್ನು ಹಾಕಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಘುವೀರ್ ಒತ್ತಾಯಿಸಿದರು.
   ಈಬಗ್ಗೆ ಮಾತನಾಡಿದ ಡಿಸಿಪಿ, ಮುಂದಿನ ಸಭೆಯಲ್ಲಿ ಟ್ರಾಫಿಕ್ ಎಸಿಪಿಯವರು ದೂರುದಾರರು ಮತ್ತು ಪೊಲೀಸ್ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
     ಸುರತ್ಕಲ್‌ನ ಬಬಿತಾ ಎಂಬವರು ಮಾತನಾಡಿ, ಸ್ತ್ರಿಶಕ್ತಿ ಸಂಘದಲ್ಲಿದ್ದು ಸಾಲ ಕೇಳಿದ ಸಂಬಂಧ ಬಹಿಷ್ಕಾರವನ್ನು ಹಾಕಿರುವ ಕುರಿತು ನೀಡಿರುವ ದೂರಿಗೆ ಸಂಬಂಧಪಟ್ಟಂತೆ ತಮ್ಮ ಹೇಳಿಕೆಯನ್ನು ಇನ್ನು ಪಡೆದುಕೊಂಡಿಲ್ಲ ಮತ್ತು ತನಿಖೆಯ ಪ್ರಗತಿಯ ಬಗ್ಗೆ ಯಾವುದೆ ಮಾಹಿತಿಯಿಲ್ಲ ಎಂದು ಆರೋಪಿಸಿದರು.
 ಈ ಬಗ್ಗೆ ಪ್ರತಿಕ್ರಿಯಿಸಿದ ಎಸಿಪಿ ಮದನ್ ಗಾಂವ್ಕರ್ ಪ್ರಕರಣ ಸಂಬಂಧ ತನಿಖೆ ನಡೆಸಲಾಗಿದ್ದು ಈ ಬಗ್ಗೆ ಕಚೇರಿಯನ್ನು ಸಂಪರ್ಕಿಸಿದರೆ ಮಾಹಿತಿಯನ್ನು ನೀಡಲಾಗುವುದು. ದೂರುದಾರರ ಹೇಳಿಕೆಯು ಅಗತ್ಯವಿದ್ದರೆ ಮಾತ್ರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
  ದಲಿತ ಮುಖಂಡ ವಿಶುಕುಮಾರ್ ಮಾತನಾಡಿ ಪ.ಜಾ, ಪ.ಪಂಗಳಿಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳು ದಾಖಲಾಗುವ ದೂರು ಮತ್ತು ಅದರ ತನಿಖೆಯ ಪ್ರಗತಿಯ ಬಗ್ಗೆ ಸಭೆಯಲ್ಲಿ ನೀಡುವಂತೆ ವಿನಂತಿಸಿದ್ದು ಮುಂದಿನ ಸಭೆಯಿಂದ ಅದನ್ನು ನಿಡುವಂತೆ ಡಿಸಿಪಿ ಶಾಂತರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News