ಎತ್ತಿನಹೊಳೆ ಯೋಜನೆಯ ಬಗ್ಗೆ ವೈಜ್ಞಾನಿಕ ನಿರ್ಧಾರ ಜಾರಿಗೆ ಬರಲಿ:ಟಿ.ಎ.ನಾರಾಯಣ ಗೌಡ
ಮಂಗಳೂರು, ಮಾ.13: ಎತ್ತಿನಹೊಳೆ ಯೋಜನೆಯ ಬಗ್ಗೆ ವೈಜ್ಞಾನಿಕ ನಿರ್ಧಾರ ಜಾರಿಗೆ ಬರಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅಭಿಪ್ರಾಯಿಸಿದ್ದಾರೆ.
ಅವರು ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಹೆಸರಿನಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರು ಅಲ್ಲೊಂದು- ಇಲ್ಲೊಂದು ಹೇಳಿಕೆ ನೀಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯ ಅಲ್ಲಿಯ ನಾಯಕರು ಎತ್ತಿನಹೊಳೆ ಪರ ಮಾತನಾಡಿದರೆ, ಇಲ್ಲಿಯ ನಾಯಕರು ವಿರೋಧ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ನಾಯಕರೂ ಇದೇ ರೀತಿ ವರ್ತಿಸುತ್ತಾರೆ. ಜನರನ್ನು ಎತ್ತಿಕಟ್ಟುವ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಎತ್ತಿನಹೊಳೆ ವಿಚಾರದಲ್ಲಿ ಸರಕಾರವು ಯಾವುದೇ ಒಂದು ಭಾಗದ ಜನರ ಪರವಾಗಿ ನಿಲ್ಲಬಾರದು. ಈ ನಿಟ್ಟಿನಲ್ಲಿ ತಾನು ನೀರಾವರಿ ಸಚಿವ ಎಂ.ಬಿ.ಪಾಟೀಲ್‌ರೊಂದಿಗೆ ಮಾತನಾಡಿದ್ದೇನೆ. ಕರಾವಳಿ ಭಾಗದ ಜನಪ್ರತಿನಿಧಿಗಳು, ತಜ್ಞರನ್ನು ಕರೆದು ಸಭೆ ನಡೆಸಲು ಸಲಹೆ ನೀಡಿದ್ದು, ಮಾ.21ರಂದು ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನೆರೆಯ ರಾಜ್ಯಗಳಲ್ಲಿ ಪಾದೇಶಿಕ ಪಕ್ಷಗಳ ಶಕ್ತಿ ಗಮನಿಸಿದರೆ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷ ಸ್ಥಾಪನೆ ಅನಿವಾರ್ಯ ಎಂದೆನಿಸುತ್ತಿದೆ. ಜೆಡಿಎಸ್ ನಿರ್ಧಾರಗಳು ಪ್ರಾದೇಶಿಕವಾಗಿ ಉಳಿಯುವ ಬಗ್ಗೆ ಸಂಶಯ ಮೂಡುತ್ತಿದೆ. ಕರವೇಯಿಂದ ರಾಜಕೀಯ ಪಕ್ಷದ ಸ್ಥಾಪನೆ ಚಿಂತನೆ ಇದ್ದರೂ, ಅಂತಿಮ ನಿರ್ಧಾರ ಆಗಿಲ್ಲ. ನಮ್ಮಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 750 ಮಂದಿ ಗೆದ್ದಿದ್ದಾರೆ. ಪಕ್ಷ ಕಟ್ಟುವುದನ್ನು ಸಾರ್ವಜನಿಕರಿಗೆ ಬಿಟ್ಟಿದ್ದೇವೆ ಎಂದರು.
ದಕ್ಷಿಣ ಕನ್ನಡದಲ್ಲಿ ದೊಡ್ಡ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪವಿದೆ. ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯ ಕನ್ನಡಿಗರಿಗೆ ಶೇ.85ರಷ್ಟು ಉದ್ಯೋಗ ಕೊಡಬೇಕು. ಶೇ.75ರಷ್ಟು ಉದ್ಯೋಗ ನೀಡಬೇಕು ಎಂಬುದು ನಮ್ಮ ಹೋರಾಟ. ಮಂಗಳೂರಿನಲ್ಲಿ ಕೆಲವು ನಾಮಲಕ ಮಲೆಯಾಳದಲ್ಲಿ ಬರೆದಿರುವುದು ಕಂಡುಬರುತ್ತಿದ್ದು, ಇದರಿಂದ ಕನ್ನಡಕ್ಕೆ ಹೊಡೆತ ಬೀಳುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿ ಗೌಡ, ಜಿಲ್ಲಾಧ್ಯಕ್ಷ ಅನಿಲ್‌ದಾಸ್, ಮುಖಂಡರಾದ ರಹೀಂ ಉಚ್ಚಿಲ್, ಬಸವರಾಜ್ ಪಡುಕೋಡಿ, ನಝೀರ್ ಹುಸೈನ್ ಬೇಂಗ್ರೆ, ಜಗದೀಶ್ ಅರಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.