ವಾಶಿಂಗ್ಟನ್, ವ್ಯೋಮಿಂಗ್ ರಾಜ್ಯಗಳಲ್ಲಿ ಟ್ರಂಪ್‌ಗೆ ಹೀನಾಯ ಸೋಲು
ವಾಶಿಂಗ್ಟನ್, ಮಾ. 13: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಶನಿವಾರ ವ್ಯೋಮಿಂಗ್ ಮತ್ತು ವಾಶಿಂಗ್ಟನ್ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಕಹಿ ಸೋಲನುಭವಿಸಿದ್ದಾರೆ.
ಅಮೆರಿಕದ ರಾಜಧಾನಿಯಲ್ಲಿ ನಡೆದ ರಿಪಬ್ಲಿಕನ್ ಕಾಕಸ್ (ಮತದಾನ)ನಲ್ಲಿ ಪಕ್ಷದ ಇನ್ನೋರ್ವ ಅಭ್ಯರ್ಥಿ ಆಕಾಂಕ್ಷಿ ಫ್ಲೋರಿಡ ಸೆನೆಟರ್ ಮಾರ್ಕೊ ರೂಬಿಯೊ ತನ್ನ ಎದುರಾಳಿಯನ್ನು ಸುಲಭವಾಗಿ ಸೋಲಿಸಿದರು.
ರೂಬಿಯೊ 37.3 ಶೇಕಡ ಮತಗಳನ್ನು ಪಡೆದರೆ, ಓಹಿಯೊ ಗವರ್ನರ್ ಜಾನ್ ಕ್ಯಾಸಿಚ್ 35.5 ಶೇ. ಮತಗಳನ್ನು ಗಳಿಸಿದರು. ಜುಜುಬಿ 13.8 ಶೇ. ಮತಗಳನ್ನು ಪಡೆದ ಟ್ರಂಪ್ ಮೂರನೆ ಸ್ಥಾನದಲ್ಲಿ ನಿಂತರು.
ವಾಶಿಂಗ್ಟನ್ ಡೆಮಾಕ್ರಟಿಕ್ ಪಕ್ಷದ ಭದ್ರ ಕೋಟೆಯಾಗಿದೆ. ಇಲ್ಲಿನ ನೋಂದಾಯಿತ ಮತದಾರರ ಪೈಕಿ ಕೇವಲ ಆರು ಶೇಕಡ ರಿಪಬ್ಲಿಕನ್ ಬೆಂಬಲಿಗರಾಗಿದ್ದಾರೆ.
ಪಶ್ಚಿಮದ ರಾಜ್ಯ ವ್ಯೋಮಿಂಗ್‌ನಲ್ಲಿ ನಡೆದ ಪಕ್ಷದ ಕಾಕಸ್‌ನಲ್ಲಿ, ಟೆಕ್ಸಾಸ್ ಸೆನೆಟರ್ ಟೆಡ್ ಕ್ರೂಝ್ 66.3 ಶೇಕಡ ಮತಗಳನ್ನು ಪಡೆದರು. 19.5 ಶೇಕಡ ಮತಗಳನ್ನು ಪಡೆದ ರೂಬಿಯೊ ಎರಡನೆಯವರಾದರು. ಕೇವಲ 7.2 ಶೇಕಡ ಮತಗಳನ್ನು ಪಡೆದ ಟ್ರಂಪ್ ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಟ್ರಂಪ್ ಪತನ ಆರಂಭ?
ಅಸಂಬದ್ಧ ಹೇಳಿಕೆಗಳು ಮತ್ತು ನಿಯಂತ್ರಣವಿಲ್ಲದ ಮಾತುಗಳ ಮೂಲಕ ರಿಯಲ್ ಎಸ್ಟೇಟ್ ದೊರೆ ಡೊನಾಲ್ಡ್ ಟ್ರಂಪ್ ತನ್ನ ರಿಪಬ್ಲಿಕನ್ ಪಕ್ಷದ ನಾಯಕತ್ವಕ್ಕೆ ಇರಿಸುಮುರಿಸು ಉಂಟು ಮಾಡಿದ್ದಾರೆ.
ಅವರ ನಿಲುವುಗಳನ್ನು ಟೀಕಿಸಲು ಸ್ವತಂತ್ರ ರಾಜಕೀಯ ಕ್ರಿಯಾ ಸಮಿತಿ (ಪಿಎಸಿ)ಗಳು ಕೋಟಿಗಟ್ಟಳೆ ಡಾಲರ್‌ಗಳನ್ನು ಖರ್ಚು ಮಾಡುತ್ತಿವೆ. ಅಂತಿಮವಾಗಿ ಅವುಗಳು ತಮ್ಮ ಪರಿಣಾಮ ಬೀರಿರುವ ಸಾಧ್ಯತೆಗಳಿವೆ.
ಟ್ರಂಪ್ ಪ್ರಚಾರ ಶೈಲಿಗೆ ಒಬಾಮ ಖಂಡನೆ
ಡಲಾಸ್, ಮಾ. 13: ಚುನಾವಣಾ ಪ್ರಚಾರ ಸಭೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಬಳಸುತ್ತಿರುವ ಪ್ರಚೋದನಾತ್ಮಕ ಭಾಷೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶನಿವಾರ ಟೀಕಿಸಿದ್ದಾರೆ.
ಟೆಕ್ಸಾಸ್ ರಾಜ್ಯದ ಡಲಾಸ್‌ನಲ್ಲಿ ಶನಿವಾರ ನಡೆದ ಡೆಮಾಕ್ರಟಿಕ್ ಪಕ್ಷದ ನಿಧಿ ಸಂಗ್ರಹ ಕಾರ್ಯಕ್ರಮವೊಂದರಲ್ಲಿ, ತನ್ನ ಪ್ರಚಾರ ಸಭೆಗಳಲ್ಲಿ ಟ್ರಂಪ್ ಪ್ರತಿಪಾದಿಸುತ್ತಿರುವ ‘‘ವಿಭಜನೆವಾದ’’ವನ್ನು ಖಂಡಿಸಿದರು.
‘ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಮಾಡೋಣ’ ಎಂಬ ಟ್ರಂಪ್‌ರ ಹೇಳಿಕೆಯನ್ನು ಪ್ರಸ್ತಾಪಿಸಿದ ಒಬಾಮ, ‘‘ನಾವು ಈಗಾಗಲೇ ಶ್ರೇಷ್ಠರಾಗಿದ್ದೇವೆ’’ ಎಂದು ತಿರುಗೇಟು ನೀಡಿದರು.