ಮಂಗಳೂರು: ಕನ್ನಡೋತ್ಸವ 2016 ಉದ್ಘಾಟನೆ
ಮಂಗಳೂರು, ಮಾ. 13: ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಇದರ 3 ನೇ ವರ್ಷದ ಸಾಮಾಜಿಕ ಸೇವಾ ಕಾರ್ಯಕ್ರಮದಂಗವಾಗಿ ಇಂದು ನಗರದ ಪುರಭವನದಲ್ಲಿ ಕನ್ನಡೋತ್ಸವ 2016 ಕಾರ್ಯಕ್ರಮವನ್ನು ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮಿಜಿ ಹಾಗೂ ಮುಸ್ಲಿಂ ಧರ್ಮಗುರು ವೌಲಾನ ಶಾಫಿ ಸಹದಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ಸಮಾಜದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹ ಧನ ಮತ್ತು ಬಡ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಜ್ಯೋತಿ ವೃತ್ತದಿಂದ ಪುರಭವನದವರೆಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಹಾಗೂ ರಾಜ್ಯ ಪ್ರಶಸ್ತಿ ವಿಜೇತ ತಂಡಗಳಿಂದ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ಕನ್ನಡ ಗಾನಸಿರಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಾಸ್ ಚಾರಿಟೇಬಲ್ ಟ್ರಸ್ಟಿಗಳಾದ ಅನಿಲ್‌ದಾಸ್, ಆಶಾಲತಾ ದಾಸ್, ಮೂಡ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಸಮಾಜ ಸೇವಕ ಯಜ್ಞೇಶ್ ಬರ್ಕೆ, ಕರವೇ ಉಡುಪಿ ಮತ್ತು ದ.ಕ ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸು ಚಿಕ್ಕಮಗಳೂರು, ಕರವೇ ರಾಜ್ಯ ಪ್ರ.ಸಂಚಾಲಕ ಬಸವರಾಜು ಪಡುಕೋಟೆ, ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷರು ಅಶ್ವಿನಿ ಗೌಡ, ರಾಜ್ಯ ಸಂಚಾಲಕಿ ಶಾರಿಕಾ, ಪ್ರಾಚಿ, ಚಲನಚಿತ್ರ ನಿರ್ಮಾಪಕ ಅಶು ಬಿದ್ರ, ನಟಿ ಮೇಘನ ಮೊದಲಾದವರು ಉಪಸ್ಥಿತರಿದ್ದರು.