ಮಂಗಳೂರು: ಸರಕಾರದ ಯೋಜನೆಯನ್ನು ತಳಮಟ್ಟದ ಜನರಿಗೆ ತಲುಪಿಸಿ: ಆಸ್ಕರ್
ಮಂಗಳೂರು, ಮಾ.12: ಸರಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಸಂಸ್ಥೆಯ ನೇತೃತ್ವದಲ್ಲಿ ಇಂದು ಬೋಂದಲ್ ಸಂತ ಲೋರೆನ್ಸ್ ಚರ್ಚ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗ್ರಾ.ಪಂ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಾಗಿ ಆಯ್ಕೆಯಾದವರು ತಮ್ಮ ವ್ಯಾಪ್ತಿಯಲ್ಲಿ ಜಾತಿಧರ್ಮ ಬೇಧವಿಲ್ಲದೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿದೆ . ಕೆಥೊಲಿಕ್ ಸಭಾ ಸ್ಥಾಪನೆಗೊಂಡ ಪ್ರಮುಖ ಉದ್ದೇಶ ಜನಸಾಮಾನ್ಯರ ಸೇವೆಗಾಗಿ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಮಂಗಳೂರು ಕೆಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿದರು. ಮಾಜಿ ಅಧ್ಯಕ್ಷ ವಾಲ್ಟರ್ ಡಿಸೋಜ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಮನಪಾ ಮೇಯರ್ ಹರಿನಾಥ್ ಮತ್ತು ನೂತನವಾಗಿ ಚುನಾಯಿತರಾದ ಜಿ.ಪಂ ಮತ್ತು ತಾ.ಪಂ ಸದಸ್ಯರುಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭೆಯ ವೆಬ್‌ಸೈಟ್ ಹಾಗೂ ಚರಿತ್ರೆಯ ಡೋಕ್ಯುಮಂಟರಿ ಬಿಡುಗಡೆಗೊಳಿಸಲಾಯಿತು. ಆಮ್ಚೋ ಸಂದೇಶ್ ಪತ್ರಿಕೆಯ ರಜತ ಮಹೋತ್ಸವದ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ,ಆಧ್ಯಾತ್ಮಿಕ ನಿರ್ದೇಶಕ ರೆ.ಫಾ.ಮ್ಯಾಥ್ಯು ವಾಸ್ ,ಬೋಂದೆಲ್ ಚರ್ಚ್ ಧರ್ಮಗುರು ಫಾ.ಆಂಡ್ರೂ ಡಿಸೋಜ, ಕೆಥೊಲಿಕ್ ಸಭಾ ಕೇಂದ್ರಿಯಾ ಅಧ್ಯಕ್ಷ ಪ್ಲೇವಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.