ಸುಳ್ಯ: ಕೊಲೆ ಶಂಕೆಯ ದೂರಿಗೆ ಕುಮ್ಮಕ್ಕು, ನಕಲಿ ಸಬ್‌ಇನ್‌ಸ್ಪೆಕ್ಟರ್ ಸುಳ್ಯದಲ್ಲಿ ಬಂಧನ
ಸುಳ್ಯ: ಸುಮಾರು ಒಂದು ತಿಂಗಳ ಹಿಂದೆ ಕನಕಮಜಲಿನಲ್ಲಿ ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿ ಆಕೆಯ ಮಗ ಕೊಲೆ ಶಂಕೆಯ ದೂರನ್ನು ಪೋಲೀಸರಿಗೆ ನೀಡಿದ್ದ ಹಾಗೂ ಈ ಘಟನೆಯಲ್ಲಿ ದೂರು ನೀಡಿದಾತನಿಗೆ ಸಹಾಯ ಮಾಡಲೆಂದು ಬಂದ ಆತನ ಸ್ನೇಹಿತ ತಾನು ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಎಂದು ಸುಳ್ಯ ಪೋಲೀಸರಿಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಮೂಡಿಗೆರೆ ಕೊಟ್ಟಿಗೆಹಾರ ದೇವಂಗೂರು ಬೆಳ್ಯಪ್ಪ ಗೌಡ ಎಂಬವರ ಪುತ್ರ ಉದಯಕುಮಾರ್ ಬಂಧಿತ ವ್ಯಕ್ತಿ. ಕನಕಮಜಲು ಗ್ರಾಮದ ಬರೆಮೇಲು ನಾರಾಯಣ ಗೌಡರ ಪತ್ನಿ ಪುಟ್ಟಮ್ಮ ಎಂಬವರು ಜ.29ರಂದು ತೋಟದಲ್ಲಿದ್ದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಸುಳ್ಯ ಪೊಲೀಸರು ಸ್ಥಳಕ್ಕೆ ಹೋಗಿ ಪ್ರಕರಣ ದಾಖಲಿಸಿ ಕೊಂಡಿದ್ದರು. ಅಸಹಜ ಸಾವು ಎಂದು ದೂರು ದಾಖಲಾಗಿತ್ತು. ಆದರೆ ಘಟನೆ ನಡೆದು ಒಂದು ತಿಂಗಳ ಬಳಿಕ (ಫೆ.27ರಂದು) ಮೃತ ಪುಟ್ಟಮ್ಮರ ಮಗ ಗಿರೀಶ್ ಸುಳ್ಯ ಪೊಲೀಸ್ ಠಾಣೆಗೆ ಬಂದು ನನ್ನ ತಾಯಿ ಹಾಗೂ ಅಕ್ಕನ ಗಂಡ ಆನಂದರವರ ನಡುವೆ ಜ.28ರಂದು ಮಾತಿನ ಚಕಮಕಿ ನಡೆದಿತ್ತು. ಅಕ್ಕನಿಗೆ ಮದುವೆ ಸಂದರ್ಭ ನೀಡಿದ ಚಿನ್ನ ಅಕ್ಕನ ಬಳಿಯಿಲ್ಲದಿರುವುದನ್ನು ತಾಯಿ ಬಾವ ಆನಂದರಲ್ಲಿ ವಿಚಾರಿಸಿದಾಗ ಅವರೊಳಗೆ ವಾಗ್ವಾದ ನಡೆದಿದೆ. ಸಂಜೆ ನಾನು ಕೆಲಸಕ್ಕೆ ಹೋದ ಬಳಿಕವೂ ಇದು ಮುಂದುವರೆದಿತ್ತು ಎಂದು ತಂದೆ ನನ್ನಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ತಂದೆ ಎದ್ದು, ತಾಯಿ ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದಾಗ ತಾಯಿಯ ದೇಹ ತೋಟದ ಕೆರೆಯಲ್ಲಿ ಇತ್ತು. ಶವ ಇದ್ದ ಪರಿಸ್ಥಿತಿ, ಕಿವಿಯಲ್ಲಿ ಆಗಿರುವ ಗಾಯ, ಆ ಬಳಿಕ ಆರೋಪಿಯ ನಡತೆಯಲ್ಲಿ ಆದ ಕೆಲವೊಂದು ಬೆಳವಣಿಗೆಗಳು ಇದು ಕೊಲೆ ಆಗಿರಬಹುದೆಂದು ತೋಚುತ್ತದೆ ಎಂದು ಗಿರೀಶ್ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಗಿರೀಶ್ ಈ ದೂರು ನೀಡುವ ಮೊದಲು ತನ್ನ ಸ್ನೇಹಿತ ಉದಯ ಕುಮಾರ್‌ರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದನೆನ್ನಲಾಗಿದೆ. ನಿಮಗೆ ಯಾರ ಮೇಲಾದರೂ ಸಂಶಯ ಇದ್ದರೆ ದೂರು ನೀಡು ತಾನು ಜತೆಯಲ್ಲಿ ಬರುವುದಾಗಿ ಉದಯಕುಮಾರ್ ಹೇಳಿದ್ದನೆನ್ನಲಾಗಿದೆ. ಬಳಿಕ ಸುಳ್ಯ ಪೊಲೀಸ್ ಠಾಣೆ ಸೇರಿದಂತೆ ಮಂಗಳೂರಿನ ಎಸ್‌ಪಿ ಕಚೇರಿ ತನಕ ಗಿರೀಶ್ ಈ ಕೇಸಿನ ಕುರಿತು ಹೋಗುತಿದ್ದ ಸಂದರ್ಭದಲ್ಲಿ ಉದಯ್ ಕುಮಾರ್ ಜತೆಯಲ್ಲೆ ಇರುತಿದ್ದ. ಗಿರೀಶ್ ನೀಡಿದ ದೂರಿನ ಕುರಿತು ಪೊಲೀಸರು ಮೂರು ಬಾರಿ ಗಿರೀಶ್‌ನನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದಿದ್ದರು. ಈ ವೇಳೆ ಜತೆಗಿದ್ದ ಉದಯ್ ತಾನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿದ್ದೇನೆ. ಇವರ ಸ್ನೇಹಿತ. ಆದ್ದರಿಂದ ಜತೆಗೆ ಬಂದಿರುವುದಾಗಿ ಹೇಳಿಕೊಂಡಿದ್ದ. ಪೊಲೀಸರು ಗಿರೀಶ್‌ರ ಜತೆಗೆ ಮಾಹಿತಿ ಕೇಳುತಿದ್ದಾಗ, ಗಿರೀಶ್ ಉತ್ತರ ನೀಡುವ ಮೊದಲೇ ಉದಯ್ ಮಧ್ಯೆ ಬಾಯಿ ಹಾಕಿ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದನೆನ್ನಲಾಗಿದೆ. ಪ್ರಥಮ ಬಾರಿಗೆ ಗಿರೀಶ್‌ನಿಂದ ಮಾಹಿತಿ ಪಡೆಯಲು ಪೊಲೀಸರು ಠಾಣೆಗೆ ಕರೆದಾಗಲೂ ಉದಯ್ ಕುಮಾರ್ ಹೋಗಿದ್ದ. ಸುಳ್ಯ ಪೊಲೀಸರ ಜತೆಗೆ ತಾನು ಎಸ್.ಐ. ಎಂದು ಹೇಳಿದ್ದರಿಂದ ನಂಬಿದ್ದ ಪೊಲೀಸರು ಆತನನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದರು. ಆದರೆ ಉದಯ್ ಆಡುತ್ತಿದ್ದ ಕೆಲವೊಂದು ಮಾತುಗಳು ಹಾಗೂ ನಡತೆಗಳು ಪೊಲೀಸರಿಗೆ ಆತನ ಮೇಲೆಯೇ ಸಂಶಯ ಬರುವಂತೆ ಮಾಡಿತ್ತು.
ಶನಿವಾರ ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್‌ರ ಕಚೇರಿಯಲ್ಲಿ ಗಿರೀಶ್‌ನನ್ನು ಪೊಲೀಸರು ಬರಹೇಳಿದ್ದರು. ಅಂದು ಗಿರೀಶ್‌ರಿಂದ ಮಾಹಿತಿ ಕಲೆ ಹಾಕುತ್ತಿದ್ದಂತೆ ಉದಯ್ ಆಡಿದ ಕೆಲವೊಂದು ಮಾತುಗಳು ಪೊಲೀಸರನ್ನು ಮತ್ತಷ್ಟು ಸಂಶಯಕ್ಕೆ ಬರುವಂತೆ ಮಾಡಿತು. ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್ ಹಾಗೂ ಎಸ್.ಐ.ಚಂದ್ರಶೇಖರರು ಉದಯ್‌ರನ್ನು ವಿಚಾರಣೆ ನಡೆಸಿ, ಐ.ಡಿ. ಕಾರ್ಡ್ ತೋರಿಸುವಂತೆ ಹೇಳಿದಾಗ, ಉದಯ್ ತಡವರಿಸಿ, ಬೆವರಿದನೆಂದೂ, ಎಸ್.ಐ.ಯವರು ಗದರಿಸಿದಾಗ ತಾನು ಎಸ್.ಐ. ಅಲ್ಲ ಎಂದು ಸತ್ಯ ಹೇಳಿದನೆಂದು ತಿಳಿದು ಬಂದಿದೆ. ಎಸ್.ಐ. ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಉದಯ್ ಕುಮಾರ್‌ನನ್ನು ಪೊಲೀಸರು ಶನಿವಾರ ಸಂಜೆ ವೇಳೆಗೆ ವಶಕ್ಕೆ ಪಡೆದುಕೊಂಡು ಆತನ ಮೇಲೆ ವಂಚಿಸಲೆತ್ನಿಸುತಿದ್ದ ಅನುಮಾನಾಸ್ಪದ ವ್ಯಕ್ತಿ ಎಂದು ಕೇಸು ದಾಖಲಿಸಿ, ತಹಶೀಲ್ದಾರರ ಎದುರು ಹಾಜರು ಪಡಿಸಿ ಜಾಮೀನು ಮೂಲಕ ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.
ಸಿಐಎಸ್‌ಎಫ್‌ನ ಎಸ್.ಐ. ಎಂದು ಹೇಳಿದ್ದ ಉದಯ್‌ಕುಮಾರ್ ಮೂಡಿಗೆರೆ ಕೊಟ್ಟಿಗೆಹಾರ ದೇವಂಗೂರು ಬೆಳ್ಯಪ್ಪ ಗೌಡ ಎಂಬವರ ಪುತ್ರ. ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ತನ್ನ ತಾಯಿ ಅನಾರೋಗ್ಯದಿಂದ ಬಳಲುತಿದ್ದು ಅವರನ್ನು ನೋಡಿಕೊಳ್ಳಲೆಂದು ಕೆಲಸ ಬಿಟ್ಟು ಮೂಡಬಿದಿರೆ ಮನೆಗೆ ಬಂದಿದ್ದ. ಅಲ್ಲಿ ಕೃಷಿಯನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಿದ್ದ. ಉದಯ್‌ಕುಮಾರ್‌ರ ಪತ್ನಿ ಉದ್ಯೋಗದಲ್ಲಿದ್ದು ಐವರ್ನಾಡಿನಲ್ಲಿ ನೆಲೆಸಿದ್ದಾರೆ. ಪತ್ನಿ ಹಾಗೂ ಮಗುವನ್ನು ನೋಡಲೆಂದು ಉದಯ್‌ಕುಮಾರ್ ಆಗಾಗ ಮೂಡಬಿದಿರೆಯಿಂದ ಐವರ್ನಾಡಿಗೆ ಬರುತಿದ್ದ. ಗಿರೀಶ್ ಕೋರಿಯರ್‌ನ ಡ್ರೈವರ್ ಆಗಿದ್ದು ಆಗಾಗ ಐವರ್ನಾಡಿಗೆ ಹೋಗುತ್ತಿದ್ದ ವೇಳೆ ಗಿರೀಶ್ ಮತ್ತು ಉದಯಕುಮಾರ್ ಸ್ನೇಹಿತರಾಗಿದ್ದರು.