ಭೂಸ್ವಾಧೀನ ವಿಧೇಯಕ

Update: 2016-03-13 18:03 GMT

ಹೊಸದಿಲ್ಲಿ, ಮಾ.13: ಮೊದಲ ಹಂತದ ಬಜೆಟ್ ಅಧಿವೇಶನದ ಮುಕ್ತಾಯಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿಯುಳಿದಿರುವಂತೆಯೇ, ಸೋಮವಾರ ಸಂಸದೀಯ ಸಮಿತಿಯು ಸಭೆ ಸೇರಿ, ವಿವಾದಾತ್ಮಕ ಭೂಸ್ವಾಧೀನ ವಿಧೇಯಕದ ಬಗ್ಗೆ ಚರ್ಚಿಸಲಿದೆ.

ಯುಪಿಎ ಸರಕಾರವು 2013ರಲ್ಲಿ ರೂಪಿಸಿದ್ದ ಭೂವಿಧೇಯಕದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲು ಹಾಲಿ ಎನ್‌ಡಿಎ ಸರಕಾರವು ಬಯಸುತ್ತಿದ್ದು, ಅದಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.
   ಭೂಸ್ವಾಧೀನತೆಯಲ್ಲಿ ನ್ಯಾಯಯುತ ಪರಿಹಾರ ಹಾಗೂ ಪಾರದರ್ಶಕತೆ, ಪುನರ್ವಸತಿ ಹಾಗೂ ಇತ್ಯರ್ಥ (ಎರಡನೆ ತಿದ್ದುಪಡಿ) ವಿಧೇಯಕ 2015ನ್ನು, ಬಿಜೆಪಿ ಸಂಸದ ಎಸ್.ಎಸ್. ಅಹ್ಲುವಾಲಿಯಾ ನೇತೃತ್ವದ ಸಮಿತಿಯು ನಾಳೆ ಪರಾಮರ್ಶೆ ನಡೆಸಲಿದೆ. ಈ ವಿಧೇಯಕಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪಕ್ಷಗಳಲ್ಲಿ ಸಹಮತ ಮೂಡಬಹುದೆಂಬ ಆಶಾವಾದವನ್ನು ಕೇಂದ್ರ ಸರಕಾರ ಹೊಂದಿದೆ. ಈಗಾಗಲೇ ಈ ಸಮಿತಿಯ ಕಾಲಾವಧಿಯನ್ನು ಐದು ಬಾರಿ ವಿಸ್ತರಿಸಲಾಗಿದೆ. ಈವರೆಗೆ ಕೆಲವೇ ಕೆಲವು ರಾಜ್ಯಗಳು ಮಾತ್ರವೇ ವಿಧೇಯಕದಲ್ಲಿನ ವಿವಿಧ ನಿಯಮಗಳ ಬಗ್ಗೆ ಇನ್ನೂ ಹಲವು ರಾಜ್ಯಗಳು ಪ್ರತಿಕ್ರಿಯೆಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಸಮಿತಿಯು ಡಿಸೆಂಬರ್ 16ರಂದು ತನ್ನ ಕಾಲಾವಧಿಯನ್ನು ಬಜೆಟ್ ಅಧಿವೇಶನದವರೆಗೂ ವಿಸ್ತರಿಸುವಂತೆ ಸರಕಾರವನ್ನು ಕೋರಿತ್ತು.
  ಕಳೆದ ವರ್ಷದ ಆಗಸ್ಟ್ 3ರಂದು ನಡೆದ ಸಮಿತಿಯ ಸಭೆಯಲ್ಲಿ ಬಿಜೆಪಿಯು, ಹಿಂದಿನ ಯುಪಿಎ ಸರಕಾರವು ತನ್ನ ಭೂಸ್ವಾಧೀನ ವಿಧೇಯಕದಲ್ಲಿ ಅಳವಡಿಸಿದ್ದ ಕೆಲವು ಪ್ರಮುಖ ನಿಯಮಗಳನ್ನು ಮರಳಿ ಅಳವಡಿಸಲು ಹಾಗೂ ನರೇಂದ್ರ ಮೋದಿ ಸರಕಾರವು ವಿಧೇಯಕದಲ್ಲಿ ಮಾಡಿದ್ದ ಕೆಲವೊಂದು ವಿವಾದಾತ್ಮಕ ತಿದ್ದುಪಡಿಗಳನ್ನು ಕೈಬಿಡಲು ಸಮ್ಮತಿಸಿತ್ತು.
    ಯುಪಿಎ ಸರಕಾರವು ಮಂಡಿಸಿದ್ದ ವಿಧೇಯಕದಲ್ಲಿದ್ದ ‘ಮಹತ್ವದ ಸಾಮಾಜಿಕ ಪರಿಣಾಮದ ವೌಲ್ಯಮಾಪನ ಹಾಗೂ ಸಮ್ಮತಿ ’ ನಿಯಮವನ್ನು ವಿಧೇಯಕದಲ್ಲಿ ಮರುಸೇರ್ಪಡೆಗೊಳಿಸಲು ಸಮಿತಿಯಲ್ಲಿದ್ದ ಎಲ್ಲಾ 11 ಮಂದಿ ಬಿಜೆಪಿ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಆದಾಗ್ಯೂ ಭೂಸ್ವಾಧೀನಪಡಿಸಿ ಐದು ವರ್ಷಗಳಾದರೂ ಅದು ಬಳಕೆಯಾಗದೆ ಇದ್ದಲ್ಲಿ ಅದನ್ನು ಅದರ ಮಾಲಕರಿಗೆ ವಾಪಸ್ ನೀಡುವುದು ಸೇರಿದಂತೆ ಮೂರು ಪ್ರಮುಖ ಕಾನೂನುಗಳ ಬಗ್ಗೆ ಸಮಿತಿಯಲ್ಲಿ ಸಹಮತ ವ್ಯಕ್ತವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News