×
Ad

ನಿವೃತ್ತ ಯೋಧರ ಸಂಘಟನೆಯಲ್ಲಿ ಅವ್ಯವಹಾರ

Update: 2016-03-13 23:48 IST

ಹೊಸದಿಲ್ಲಿ, ಮಾ.13: ನಿವೃತ್ತ ಯೋಧರು ಹಾಗೂ ಮೃತ ಸೈನಿಕರ ವಿಧವೆಯರಿಗಾಗಿನ ಸಂಘಟನೆಯೊಂದರಲ್ಲಿ ನಡೆದಿದೆಯೆನ್ನಲಾದ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿ ಗುರ್ಗಾಂವ್‌ನ ನ್ಯಾಯಾಲಯವೊಂದು ವಾಯುಪಡೆಯ ನಿವೃತ್ತ ವಿಂಗ್‌ಕಮಾಂಡರ್ ಸಿ.ಕೆ.ಶರ್ಮಾ ಗೆ ಮಾರ್ಚ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 420 (ವಂಚನೆ), 406 (ಕ್ರಿಮಿನಲ್ ಸ್ವರೂಪದ ವಿಶ್ವಾಸದ್ರೋಹ) ಹಾಗೂ 34 (ಸಮಾನ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳು ನಡೆಸಿದ ಕುಕೃತ್ಯ)ರ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ.
  ನಿವೃತ್ತ ಸೇನಾಧಿಕಾರಿ, ಮಾಜಿ ಸೈನಿಕ ಚಳವಳಿ (ಐಇಎಸ್‌ಎಂ) ಸಂಘಟನೆಯ ಅಧ್ಯಕ್ಷ ಲೆ.ಜ. ರಾಜ್‌ಕಡಿಯಾನ್, ಫೆಬ್ರವರಿ 8ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶರ್ಮಾ ಸೇರಿದಂತೆ ಮೂವರು ಆರೋಪಿಗಳು ಸಂಘದ ನಿಧಿಯಿಂದ ಭಾರೀ ಮೊತ್ತದ ಹಣವನ್ನು ಲಪಟಾಯಿಸಿದ್ದಾರೆಂದು ಆರೋಪಿಸಿದ್ದರು.
   ಜಾಮೀನು ಬಿಡುಗಡೆ ಕೋರಿ ಆರೋಪಿಗಳಾದ ಶರ್ಮಾ, ನಿವೃತ್ತ ಮೇ.ಜ. ಸತ್‌ಬೀರ್‌ಸಿಂಗ್ ಹಾಗೂ ನಿವೃತ್ತ ಕ್ಯಾಪ್ಟನ್ ವಿ.ಕೆ.ಗಾಂಧಿ ಇತ್ತೀಚೆಗೆ ಸ್ಥಳೀಯ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಮೂವರು ಆರೋಪಿಗಳು 2008ರಲ್ಲಿ ಸ್ಥಾಪನೆಯಾದ ಐಇಎಸ್‌ಎಂನ ಪದಾಧಿಕಾರಿಗಳಾಗಿದ್ದರು. ಸೊಸೈಟಿಯ ಖಾತೆಯನ್ನು ಸ್ಥಳೀಯ ಬ್ಯಾಂಕೊಂದು ನಿರ್ವಹಿಸುತ್ತಿತ್ತು. ಶರ್ಮಾ ಸೊಸೈಟಿಯ ಖಜಾಂಚಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News