×
Ad

ಎಲ್‌ಒಸಿಯಲ್ಲಿ ಚೀನಿ ಪಡೆಗಳು ಮತ್ತೆ ಪ್ರತ್ಯಕ್ಷ

Update: 2016-03-13 23:50 IST

ಪಿಒಕೆ ಗಡಿಯಲ್ಲಿ ಚೀನಿ ಸೇನೆಯಿಂದ ರಸ್ತೆ ನಿರ್ಮಾಣ

ಶ್ರೀನಗರ, ಮಾ.13: ಜಮ್ಮುಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ಈ ಹಿಂದೆ ಸರಣಿ ಅತಿಕ್ರಮಣಗಳನ್ನು ನಡೆಸಿರುವ ಚೀನಿ ಪಡೆಗಳು, ಇತ್ತೀಚಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ತಾಗಿಕೊಂಡಿರುವ ಗಡಿನಿಯಂತ್ರಣ ರೇಖೆ (ಎಲ್‌ಒಸಿ)ಯ ಮುಂಚೂಣಿ ಠಾಣೆಗಳಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭದ್ರತಾಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

ಉತ್ತರಕಾಶ್ಮೀರದ ನೌಗಾಮ್ ವಲಯದ ಎದುರಿಗಿರುವ ಪಾಕ್ ಮುಂಚೂಣಿ ಠಾಣೆಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯನ್ನು ಭಾರತೀಯ ಸೇನೆ ಗಮನಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಎಲ್‌ಒಸಿ ಸಮೀಪ ರಸ್ತೆ ಮತ್ತಿತರ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಪಿಎಲ್‌ಎ ಪಡೆಗಳು ಆಗಮಿಸಿರುವುದಾಗಿ ಪಾಕ್ ಸೇನಾಧಿಕಾರಿಗಳ ಸಂಭಾಷಣೆಗಳ ಕದ್ದಾಲಿಕೆಯಿಂದ ತಿಳಿದುಬಂದಿರುವುದಾಗಿ ಸೇನಾಮೂಲಗಳು ತಿಳಿಸಿವೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತಾಗಿಕೊಂಡಿರುವ ಎಲ್‌ಒಸಿ ಪ್ರದೇಶದಲ್ಲಿ ಚೀನಿ ಪಡೆಗಳ ಉಪಸ್ಥಿತಿಯು 2015ರಲ್ಲಿ ಮೊದಲಬಾರಿಗೆ ಪತ್ತೆಯಾಗಿತ್ತು. ಆನಂತರ ಚೀನಿ ಸರಕಾರ ಮಾಲಿಕತ್ವದ ಗೆರೊಬಾ ಗ್ರೂಪ್ ಕಂಪೆನಿಯು, ಪಾಕ್‌ನ ತಾಂಗ್‌ಧಾರ್ ವಲಯದಲ್ಲಿ ಝೀಲಂ -ನೀಲಂ ನದಿಗೆ ನಿರ್ಮಿಸುತ್ತಿರುವ 970 ಮೆಗಾವ್ಯಾಟ್ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಯ ಪ್ರದೇಶದಲ್ಲಿಯೂ ಚೀನಿ ಪಡೆಗಳು ಗೋಚರಿಸಿದ್ದವು. ಉತ್ತರಕಾಶ್ಮೀರದ ಬಂಡಿಪೋರ್‌ನಲ್ಲಿ ಭಾರತ ನಿರ್ಮಿಸುತ್ತಿರುವ ಕಿಶನ್‌ಗಂಗಾ ಯೋಜನೆಗೆ ಪ್ರತಿಯಾಗಿ ಪಾಕ್ ಈ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುತ್ತಿದೆ.

ಲೀಪಾ ಕಣಿವೆಯಲ್ಲಿ ಪಿಎಲ್‌ಎ ಸೈನಿಕರು ಸುರಂಗಗಳನ್ನು ತೋಡುತ್ತಿರುವುದಾಗಿ ಪಾಕ್ ಸೇನಾಧಿಕಾರಿಗಳ ದೂರವಾಣಿ ಸಂಭಾಷಣೆಗಳ ಕದ್ದಾಲಿಕೆಯಿಂದ ತಿಳಿದುಬಂದಿದೆ. ಕಾರಕೋರಂ ಹೆದ್ದಾರಿಯನ್ನು ಸಂಪರ್ಕಿಸಲು ಪರ್ಯಾಯ ಮಾರ್ಗವಾಗಿ ಸರ್ವಋತು ರಸ್ತೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಸುರಂಗಗಳನ್ನು ನಿರ್ಮಿಸಲಾಗುತ್ತಿದೆಯೆಂದು ತಿಳಿದುಬಂದಿದೆ.

ಚೀನಾದ 46 ಶತಕೋಟಿ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಭಾಗವಾಗಿ ಪಿಎಲ್‌ಎ ಅಧಿಕಾರಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆಂದು ಸೇನಾತಜ್ಞರು ಭಾವಿಸಿದ್ದಾರೆ. ಈ ಬೃಹತ್ ಯೋಜನೆಯಡಿ ಕರಾಚಿಯ ಗ್ವಾದರ್ ಬಂದರನ್ನು ಕಾರಕೋರಂ ಹೆದ್ದಾರಿಯ ಮೂಲಕ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ ಸಂಪರ್ಕಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News