ಮ್ಯಾನ್ಮಾರ್‌ನಲ್ಲಿ ಸಂಘರ್ಷ: ಸಾವಿರಾರು ನಾಗರಿಕರ ಪಲಾಯನ
Update: 2016-03-13 23:51 IST
ನೇಪಿಡವ್ (ಮ್ಯಾನ್ಮಾರ್), ಮಾ. 13: ಈಶಾನ್ಯ ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಬಂಡುಕೋರರು ಮತ್ತು ಸೇನೆಯ ನಡುವೆ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಸಾವಿರಾರು ನಾಗರಿಕರು ತಮ್ಮ ಮನೆಗಳನ್ನು ತೊರೆದಿದ್ದಾರೆ.
ನಿರ್ಗಮನ ಸೇನಾ ಸರಕಾರ ದೇಶದ ಆಡಳಿತವನ್ನು ಆಂಗ್ ಸಾನ್ ಸೂ ಕಿಯ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ನೇತೃತ್ವದ ನಾಗರಿಕ ಸರಕಾರವನ್ನು ಹಸ್ತಾಂತರಿಸುವ ಸಂಕ್ರಮಣ ಘಟ್ಟದಲ್ಲಿ ಶಾನ್ ರಾಜ್ಯದಲ್ಲಿ ಗಲಭೆ ಕಾಣಿಸಿಕೊಂಡಿದೆ.
ಮ್ಯಾನ್ಮಾರ್‌ನ ಪೂರ್ವದ ಗಡಿಯಲ್ಲಿರುವ ಗುಡ್ಡಗಾಡುಗಳಿಂದ ಕೂಡಿದ ಬೃಹತ್ ರಾಜ್ಯ ಶಾನ್‌ನಲ್ಲಿ ದಶಕಗಳ ಅವಧಿಯಲ್ಲಿ ಹಲವಾರು ಬಾರಿ ಬಂಡಾಯ ಕಾಣಿಸಿಕೊಂಡಿದೆ. ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಿನ ಸ್ವಾಯತ್ತೆ ಅಥವಾ ಸ್ವಾತಂತ್ರ ಬೇಕೆಂದು ಒತ್ತಾಯಿಸಿ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ.
ಈ ಬಾರಿ ಸೇನೆಯು ಟಾಂಗ್ ನ್ಯಾಶನಲ್ ಲಿಬರೇಶನ್ ಆರ್ಮಿ (ಟಿಎನ್‌ಎಲ್‌ಎ)ಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ.