×
Ad

ಅನಾರೋಗ್ಯ ಪೀಡಿತ ಅಡ್ಯಾರ್ ಗ್ರಾಪಂ ಸದಸ್ಯೆಯ ಸದಸ್ಯತ್ವ ರದ್ದು!

Update: 2016-03-13 23:51 IST

9 ತಿಂಗಳಾದರೂ ಪ್ರಮಾಣ ಪತ್ರ ನೀಡದ ಪಂಚಾಯತ್
ದಯನೀಯ ಸ್ಥಿತಿಯಲ್ಲಿ ಮಾಜಿ ಸದಸ್ಯೆ ಖತೀಜಾ ಕುಟುಂಬ

ಮಂಗಳೂರು, ಮಾ.13: ಅನಾರೋಗ್ಯದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಗಳಿಗೆ ಹಾಜರಾಗದ ಕಾರಣಕ್ಕೆ ತಾಲೂಕಿನ ಅಡ್ಯಾರ್ ಗ್ರಾಪಂ ಸದಸ್ಯೆ ಖತೀಜಾ ಎಂಬವರ ಸದಸ್ಯತ್ವವನ್ನು ರದ್ದುಗೊಳಿಸಿ ಆ ಸ್ಥಾನಕ್ಕೆ ಮರು ಚುನಾವಣೆ ನಡೆಸಲು ಮುಂದಾಗಿರುವ ಗ್ರಾಪಂನ ಕ್ರಮ ವಾರ್ಡ್‌ನ ಜನರ ಆಕ್ರೋ ಶಕ್ಕೆ ಕಾರಣವಾಗಿದೆ. 2015ರ ಮೇ ತಿಂಗಳಲ್ಲಿ ನಡೆದ ಗ್ರಾಪಂ ಚುನಾವಣೆಗೆ ಅಡ್ಯಾರ್ ಗ್ರಾಮದ ವಾರ್ಡ್ ಸಂಖ್ಯೆ 1ರಲ್ಲಿ ಸ್ಪರ್ಧಿಸಿದ್ದ ಖತೀಜಾರಿಗೆ, ಮತ ಎಣಿಕೆ ದಿನವಾದ ಜೂನ್ 5ರಂದು ಬೆಳಗ್ಗೆ ಇದ್ದಕಿದ್ದಂತೆ ತಲೆ ನೋವು ಕಾಣಿಸಿಕೊಂಡಿತ್ತು.

ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಅಲ್ಲಿನ ವೈದ್ಯರು ಖತೀಜಾರಿಗೆ ಬ್ರೈನ್ ಟ್ಯೂಮರ್ ಎಂದು ತಿಳಿಸಿದ್ದರು. ಇದರ ನಡುವೆಯೂ ಖತೀಜಾ ಭರ್ಜರಿ ಮತಗಳಿಂದ ಎರಡನೆ ಬಾರಿಗೆ ಗ್ರಾಪಂ ಸದಸ್ಯೆಯಾಗಿ ಗೆಲುವು ಸಾಧಿಸಿದ್ದರು. ತಳಮಟ್ಟದ ಕ್ರಿಯಾಶೀಲ ನಾಯಕಿಯಾಗಿ ಗುರುತಿಸಿದ್ದ ಖತೀಜಾ ಅಂದಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆ ನಡೆದು ಇಂದಿಗೆ 9 ತಿಂಗಳಾದರೂ ಖತೀಜಾ ಒಮ್ಮೆಯೂ ಪಂಚಾಯತ್ ಸಾಮಾನ್ಯ ಸಭೆಗೆ ಹಾಜರಾಗಿಲ್ಲ.

ಹಾಜರಾಗುವ ಸ್ಥಿತಿಯಲ್ಲೂ ಅವರಿಲ್ಲ. ಅವರು ಸದಸ್ಯೆಯಾಗಿ ಆಯ್ಕೆಯಾದ ಪ್ರಮಾಣಪತ್ರ ಇನ್ನೂ ಅವರ ಕೈ ಸೇರಿಲ್ಲ. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಪಾವತಿಸಿದ್ದ ಠೇವಣಿಯನ್ನು ಕೂಡಾ ಅವರಿಗೆ ತಲುಪಿಸುವ ನಿಷ್ಠೆಯನ್ನು ಪಂಚಾಯತ್ ತೋರಿಲ್ಲ. ನಿರಂತರ ಮೂರು ಸಾಮಾನ್ಯ ಸಭೆಗೆ ಗೈರು ಹಾಜ ರಾದ ಕಾರಣದಿಂದ ಇದೀಗ ಅವರ ಸದಸ್ಯತ್ವವನ್ನು ರದ್ದು ಾಡಿ ಆ ಸ್ಥಾನಕ್ಕೆ ಚುನಾವಣೆ ನಡೆಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ್ದಾರೆ!. ಇದು ಸ್ಥಳೀಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ವಿಕಲಚೇತನರಾಗಿರುವ ಅಬ್ದುಲ್ಲಾ ಇಬ್ಬರು ಪುತ್ರಿಯರು, ಓರ್ವ ಪುತ್ರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಪುತ್ರ ಮಂಗಳೂರಿನ ಎಸ್‌ಟಿಡಿ ಬೂತ್‌ನಲ್ಲಿ ದುಡಿದ ಹಣದಿಂದಲೇ ಮನೆ, ಆಸ್ಪತ್ರೆ ಖರ್ಚು ಸಾಗಬೇಕು. ಬಾಡಿಗೆ ಮನೆಯಲ್ಲಿ ವಾಸವಾಗಿರುವುದರಿಂದ ದಾಖಲೆಗಳ ಕೊರತೆ ಕಾರಣ ನೀಡಿ ಬಿಪಿಎಲ್ ಕಾರ್ಡ್ ನೀಡಿರಲಿಲ್ಲ. ಕೊನೆಗೂ ಕಳೆದ ವರ್ಷ ಓರ್ವ ಅಧಿಕಾರಿಯ ಮುತುವರ್ಜಿಯಿಂದ ಬಿಪಿಎಲ್ ಕಾರ್ಡ್ ಹೊಂದುವಂತಾಗಿದೆ ಎಂದು ಅಬ್ದುಲ್ಲಾ ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಾರೆ. ವಿಶೇಷವೆಂದರೆ, ಗ್ರಾಪಂ ಸದಸ್ಯೆಯಾಗಿ ಆಯ್ಕೆಯಾದ ಬಳಿಕ ಸರಕಾರದಿಂದ ತನ್ನ ಹೆಸರಿಗೆ ಎಷ್ಟು ಅನುದಾನ ಬಂದಿದೆ. ಅದು ಯಾವ ರೀತಿ ಖರ್ಚಾಗಿದೆ, ಯಾರು ಖರ್ಚು ಮಾಡಿದ್ದಾರೆ ಎಂಬಿತ್ಯಾದಿ ಯಾವುದೇ ಮಾಹಿತಿ ಖತೀಜಾರಿಗಿಲ್ಲ. ಅಷ್ಟೇ ಅಲ್ಲದೆ, ಗ್ರಾಪಂ ಸದಸ್ಯರಿಗೆ ಸರಕಾರದಿಂದ ಬರುವ ಮಾಸಿಕ 500 ರೂ. ಸಹಾಯಧನವೂ ತನಗೆ ತಲುಪಿಲ್ಲ ಎಂದು ಖತೀಜಾ ಹೇಳುತ್ತಾರೆ.

ಎರಡು ಬಾರಿ ಗ್ರಾಪಂ ಸದಸ್ಯೆಯಾಗಿ ಆಯ್ಕೆಯಾದ ಒಬ್ಬ ಪಕ್ಷದ ಸಕ್ರಿಯ ಕಾರ್ಯಕರ್ತೆ ಸಾಮಾನ್ಯ ಸಭೆಗಳಿಗೆ ಬಾರದೆ ಸದಸ್ಯತ್ವ ರದ್ದುಗೊಂಡು ಅವರ ಸ್ಥಾನಕ್ಕೆ ಮರು ಚುನಾವಣೆ ನಡೆಯುತ್ತಿರುವುದು ಪಕ್ಷದ ಜಿಲ್ಲಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಕ್ಷೇತ್ರದ ಶಾಸಕ ಮೊಯ್ದಿನ್ ಬಾವರವರ ಗಮನಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಮತ.


ಮತ ಹಾಕಿಸಲು ಬಂದವರು ಹಿಂತಿರುಗಿ ನೋಡಿಲ್ಲ

ಖತೀಜಾ ಪಕ್ಷಕ್ಕಾಗಿ ಹಗಲಿರುಳು ದುಡಿದವರು. ಮೊದಲ ಬಾರಿಗೆ ಆಯ್ಕೆಯಾದಾಗ ಮಾಡಿದ ಜನಸೇವೆಯಿಂದ ಅವರು ಎರಡನೆ ಬಾರಿಗೆ ಭರ್ಜರಿ ಗೆಲುವು ಸಾಧಿಸುವಂತಾಯಿತು. ಇದೀಗ ಅನಾರೋಗ್ಯ ಪೀಡಿತರಾಗಿದ್ದು, ಯಾವುದೇ ಸಭೆಗೆ ಹಾಜರಾಗಲು ಅವರಿಂದ ಅಸಾಧ್ಯವಾಗಿದೆ. ಆದರೆ, ಓರ್ವ ಸಕ್ರಿಯ ಸದಸ್ಯೆ ನಿರಂತರ ಸಭೆಗೆ ಗೈರು ಹಾಜರಾಗುತ್ತಿರುವ ಬಗ್ಗೆ ತಿಳಿಯಲು ಅವರ ಪಕ್ಷದ ಯಾವುದೇ ನಾಯಕನಾಗಲಿ, ಪಿಡಿಒ ಆಗಲಿ ಮನೆಗೆ ಭೇಟಿ ನೀಡಿಲ್ಲ. ಆದರೆ, ಕಳೆದ ವಿಧಾನ ಪರಿಷತ್ ಹಾಗೂ ಜಿಪಂ, ತಾಪಂ ಚುನಾವಣೆ ಸಂದರ್ಭದಲ್ಲಿ ಮನೆಗೆ ಬಂದ ಪಕ್ಷದವರು ತೀರಾ ಅಸೌಖ್ಯದಿಂದ ಮಲಗಿದ್ದ ಖತೀಜಾರನ್ನು ಆಟೊ ಮೂಲಕ ಕರೆದುಕೊಂಡು ಹೋಗಿ ಮತ ಹಾಕಿಸಿ ಕರೆ ತಂದಿದ್ದಾರೆ. ಅವರ ಲಾಭಕ್ಕಾಗಿ ಮಾತ್ರ ನಮ್ಮನ್ನು ಉಪಯೋಗಿಸುತ್ತ್ತಿದ್ದಾರೆ ಎಂದು ಖತೀಜಾರ ಪತಿ ಅಬ್ದುಲ್ಲಾ ದುಃಖದಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News