×
Ad

ಮಂಗಳೂರು ವಲಯ ಮಟ್ಟದ ಕ್ರಿಕೆಟ್: ನೇತಾಜಿ ತಂಡಕ್ಕೆ ಪ್ರಶಸ್ತಿ

Update: 2016-03-13 23:56 IST

 ಉಡುಪಿ, ಮಾ.13: ಪರ್ಕಳ ನೇತಾಜಿ ಸ್ಪೋರ್ಟ್ಸ್ ಕ್ಲಬ್ಬಿನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಮತ್ತು ಮಣಿಪಾಲ ವಿವಿ ಸಹಯೋಗದೊಂದಿಗೆ ಮಣಿಪಾಲದ ವಿವಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮಂಗಳೂರು ವಲಯ ಮಟ್ಟದ ‘ನೇತಾಜಿ ಕ್ರಿಕೆಟ್ 20-20’ ಹಾರ್ಡ್‌ಬಾಲ್ ಪಂದಾವಳಿಯಲ್ಲಿ ಆತಿಥೇಯ ನೇತಾಜಿ ಸ್ಪೋಟ್ಸ್ ಕ್ಲಬ್ ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ ಆತಿಥೇಯ ನೇತಾಜಿ ಸ್ಪೋಟ್ಸ್ ಕ್ಲಬ್ ತಂಡವು ಕಾಪುವಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ ತಂಡವನ್ನು 20 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿ ಹಾಗೂ 25,000 ರೂ. ನಗದು ಬಹುಮಾನ ಗೆದ್ದುಕೊಂಡಿತು. ಕೆಆರ್‌ಸಿಎ ತಂಡವು ಪ್ರಶಸ್ತಿ ಮತ್ತು 15,000 ರೂ. ನಗದು ಬಹುಮಾನ ಪಡೆಯಿತು.

ರವಿವಾರ ಜರಗಿದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೇತಾಜಿ ತಂಡವು ನಿಗದಿತ 20 ಓವರ್‌ಗಳ 172 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೆ.ಆರ್.ಸಿ.ಎ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 152 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿ 20 ರನ್‌ಗಳ ಅಂತರದಿಂದ ಸೋಲು ಕಂಡಿತು. ನಿತಿನ್ ಮುಲ್ಕಿ ‘ದಿವಂಗತ ಪಾಂಡುರಂಗ ನಾಯ್ಕಿ ಸ್ಮರಣಾರ್ಥ ಸರಣಿ ಶ್ರೇಷ್ಠ’, ಕೆಆರ್‌ಸಿಎ ತಂಡದ ನೌಶಾದ್ ಉತ್ತಮ ಬ್ಯಾಟ್ಸ್‌ಮನ್, ಯುನೈಫ್ ಉತ್ತಮ ಬೌಲರ್, ಇಮ್ತಿ ಯಾಝ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಗೆ ಪಾತ್ರರಾದರು. ಯಾಸಿರ್ ಫೈನಲ್ ಪಂದ್ಯದಲ್ಲಿ ಪುರುಷೋತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಲಾತವ್ಯ ಆಚಾರ್ಯ ಬಹುಮಾನ ವಿತರಿಸಿದರು. ಉದ್ಯಮಿ ಗಳಾದ ಪ್ರಸಾದ್ ಶೆಟ್ಟಿ, ಶುಕೂರು ಗೊನ್ನಾ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಉದಯ ಕುಮಾರ್ ಕಿನ್ನಿ ಮುಲ್ಕಿ, ಯೂಸುಫ್ ಹಾಜಿ ಕಲ್ಲಡ್ಕ, ಚಂದ್ರಶೇಖರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ನೂತನ್ ರಾಜ್ ವಂದಿಸಿದರು. ರಾಮದಾಸ್ ಮಧ್ವನಗರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News