ಕಡಬ: 3 ಜಿಲ್ಲೆಗಳಲ್ಲಿ ಎಂಡೋ ಶಾಸ್ವತ ಪುನರ್ವಸತಿ ಕೇಂದ್ರಕ್ಕೆ ಪ್ರಸ್ತಾವನೆ-ಡಾ ಶ್ರೀನಿವಾಸ್
ಕಡಬ, ಮಾ.14. ಎಂಡೋ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಸ್ಪಂಧಿಸುವ ನಿಟ್ಟಿನಲ್ಲಿ ಎಂಡೋ ಶಾಸ್ವತ ಪುನರ್ವಸತಿ ಕೇಂದ್ರ ಸ್ಥಾಪಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ರೂಪಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕ ಡಾ ಶ್ರೀನಿವಾಸ್ ಹೇಳಿದರು.
ಅವರು ಸೋಮವಾರ ಕೊಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೋ ಪೀಡಿತ ಮಕ್ಕಳ ಯೋಗ ಕ್ಷೇಮ ವಿಚಾರಿಸಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರಿಗಾಗಿ ಶಾಸ್ವತ ಪುನರ್ವಸತಿ ಕೇಂದ್ರ ಸ್ಥಾಪನೆಯ ಉದ್ಧೇಶವನ್ನು ಹೊಂದಿದ್ದು, ಅಲ್ಲಿ 100 ಹಾಸಿಗೆಯ ವಿಶೇಷ ಆಸ್ಪತ್ರೆ ನಿರ್ಮಿಸಲಾಗುವುದಲ್ಲದೆ, ಎಂಡೋ ಪೀಡಿತರ ಪಾಲನೆಯ ಜೊತೆಗೆ ಮಲಗಿದಲ್ಲೇ ಇರುವ ಎಂಡೋ ಪೀಡಿತರಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿಕೊಂಡು ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
ಎಂಡೋ ಸಂತ್ರಸ್ತರಿಗೆ ಬರುವ ಮಾಶಾಸನ ಪ್ರತಿ ತಿಂಗಳು ನಿಯಮಿತವಾಗಿ ಬರುತ್ತಿಲ್ಲ, ಕೆಲವೊಮ್ಮೆ 4 ಯಾ 5 ತಿಂಗಳು ಬಾಕಿ ಇರುತ್ತದೆ, ಇದರಿಂದ ಸಂಕಷ್ಟದಲ್ಲಿ ಇರುವ ಸಂತ್ರಸ್ತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಅಧಿಕಾರಿಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕಾರ್ಯದರ್ಶಿ ಡಾ ಶ್ರೀನಿವಾಸ್ ಪ್ರತಿಕ್ರಿಯಿಸಿ "ನಮ್ಮಿಂದ ಯಾವುದೂ ಬಾಕಿ ಇಲ್ಲ, ಪ್ರತೀ ತಿಂಗಳೂ ಸರಿಯಾಗಿ ಬಟವಾಡೆ ಆಗುತ್ತಿದೆ" ಎಂದರು. ಆಗ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಎಂಡೋ ನೋಡೆಲ್ ಅಧಿಕಾರಿ ಡಾ ಅರುಣ್ ಕುಮಾರ್ ಪ್ರತಿಕ್ರಿಯಿಸಿ "ಅದು ತಾಂತ್ರಿಕ ತೊಂದರೆಯಿಂದ ಹೀಗಾಗುತ್ತಿದೆ, ಇದೀಗ ಈ ಸಮಸ್ಯೆ ಸರಿ ಆಗಿದೆ’ ಎಂದರು. ಜಂಟಿ ನಿರ್ಧೇಶಕರ ಕಚೇರಿಯ ಕಿರಿಯ ಆರೋಗ್ಯ ಸಹಾಯಕ ಬಸವರಾಜು, ದ.ಕ. ಜಿಲ್ಲಾ ಎಂಡೋ ಸಂಯೋಜಕ ತಾಜುದ್ದೀನ್ ಪೂರಕ ಮಾಹಿತಿ ನೀಡಿದರು. ಎಂಡೋ ಸಂತ್ರಸ್ತರಿಗಾಗಿ ಸಹಕಾರ ಸಂಘ ಸ್ಥಾಪಿಸಿರುವುದು ಒಳ್ಳೆಯ ಚಿಂತನೆಯಾಗಿದ್ದು, ಇದಕ್ಕೆ ಸರ್ಕಾರ, ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಕರ್ನಾಟಕ ರಾಜ್ಯದಾದ್ಯಂತ ಸುಮಾರು 6 ಸಾವಿರ ಮಂದಿ ಎಂಡೋ ಸಂತ್ರಸ್ತರಿದ್ದಾರೆ. ಅದರಲ್ಲೂ ದ.ಕ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಮಿಕ್ಕಿ ಸಂತ್ರಸ್ತರಿದ್ದಾರೆ. ಆದರೆ ಎಂಡೋ ಸಂತ್ರಸ್ತರ ಮೊದಲ ಹಂತದ ವೈದ್ಯಕೀಯ ಶಿಬಿರದಲ್ಲಿ ಸಂತ್ರಸ್ತರ ಗುರುತಿಸುವಿಕೆಯಲ್ಲಿ ದೋಷವಾಗಿದ್ದು, ಕೇವಲ ಅಂಗವಿಕಲರನ್ನು ಸಂತ್ರಸ್ಥರನ್ನಾಗಿಸಲಾಗಿತ್ತು. ಇದರಲ್ಲಿ ಅಪಘಾತದಲ್ಲಿ ನೂನ್ಯತೆಯಲ್ಲಿರುವವರು, 65 ವರ್ಷದ ಪ್ರಾಯದ ಸಾಧಾರಣ ಕಿವಿ ಕೇಳದವರು, ಪಾರ್ಶ್ವವಾಯು ಪೀಡಿತರು, ಕೋಳಿ ಅಂಕದಲ್ಲಿ ಗಾಯಗೊಂಡವರು, ಕೈಯಲ್ಲಿ ಹತ್ತು ಬೆರಳಿನ ಬದಲು ಹನ್ನೊಂದು ಬೆರಳು ಇದ್ದವರು ಎಂಡೋ ಸಂತ್ರಸ್ತರಾಗಿದ್ದಾರೆ. ಹೀಗಾಗಿ ಎಂಡೋ ಸಂತ್ರಸ್ತರಿಗೆ ದೊರಕಬೇಕಾದ ಸವಲತ್ತು ದುರುಪಯೋಗ ಆಗಬಾರದು, ಆದ ಕಾರಣ ಎಂಡೋ ಸಂತ್ರಸ್ತರ ಪಟ್ಟಿಯನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಅಧಿಕಾರಿ ಭೇಟಿ ಸಂದರ್ಭದಲ್ಲಿ ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಕಾರ್ಯದರ್ಶಿ ಜಯಕರ ಪೂಜಾರಿ, ಸದಸ್ಯರಾದ ರಾಮಮೋಹನ್ ರೈ, ಎಂಡೋ ಸಂತ್ರಸ್ತರ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಗಂಗಾರತ್ನ ವಸಂತ, ನಿರ್ಧೇಶಕ ಅಬ್ಬಾಸ್ ಕೊಂತೂರು, ಕೊಯೈಲ ಎಂಡೋ ಪಾಲನಾ ಕೇಂದ್ರದ ಸಂಯೋಜಕಿ ಶ್ರೀಮತಿ ನಮಿತ, ಕೊಕ್ಕಡ ಎಂಡೋ ಪಾಲನಾ ಕೇಂದ್ರದ ಸಂಯೋಜಕ ಅವಿನಾಶ್, ಫಿಸಿಯೋಥೆರಪಿ ಬಿಜೋಯ್ ಉಪಸ್ಥಿತರಿದ್ದರು.