ಮರದ ನೆರಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪಾಠ ! - ಸುಳ್ಯ ಜೂನಿಯರ್ ಕಾಲೇಜು ಶಿಕ್ಷಕರ ವಿಸೇಷ ಆಸಕ್ತಿ
ಸುಳ್ಯ: ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಜೆಒಸಿ ಕಟ್ಟಡ ಹಾಗೂ ಮೈದಾನದ ಮರದ ನೆರಳಿನಲ್ಲಿ ನಡೆಸಲಾಗುತ್ತಿದೆ. ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಗೆ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದು, ಇದಕ್ಕಾಗಿ 8 ಹಾಗೂ 9ನೇ ತರಗತಿಯ ಪರೀಕ್ಷೆಗಳನ್ನು ಅದಕ್ಕೂ ಮೊದಲು ಮುಗಿಸುವ ಜವಾಬ್ದಾರಿ ಶಾಲಾ ಶಿಕ್ಷಕರದ್ದು, ಪ್ರತಿ ವರ್ಷದಂತೆ ಈ ವರ್ಷವೂ 8 ಹಾಗೂ 9ನೇ ತರಗತಿ ಪರೀಕ್ಷೆಗಳನ್ನು ನಡೆಸಲಾಗಿದೆ. ಹಾಗಿದ್ದೂ ಪ್ರತಿ ತರಗತಿಯಲ್ಲಿ 200ರಿಂದ 250 ಮಕ್ಕಳಿದ್ದು, ಅವರ ಪರೀಕ್ಷೆಯ ಉತ್ತರ ಪರೀಕ್ಷೆಗಳನ್ನೂ ಮೌಲ್ಯಮಾಪನ ಮಾಡಬೇಕಾಗಿದೆ. ಇದರೆಲ್ಲಾ ಮಧ್ಯೆಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಶಿಕ್ಷಕರು ಸ್ವಯಂ ಸ್ಪೂರ್ತಿಯಿಂದ ನಡೆಸುತ್ತಾರೆ.
ಪ್ರಸ್ತುತ ಪಿಯುಸಿ ಪರೀಕ್ಷೆಗಳ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಕ್ರೀಡಾಂಗಣದ ಮರದ ನೆರಳು ಹಾಗೂ ಜೆಒಸಿಹ ಹಳೆಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಸಿಗಬೇಕು ಎನ್ನುವ ಕಾರಣಕ್ಕೆ ಉಪ ಪ್ರಾಂಶುಪಾಲೆ ಜಯಶ್ರೀ ಅವರ ಉತ್ಸಾಹಕ್ಕೆ, ಎಲ್ಲಾ ಶಿಕ್ಷ ವರ್ಗದವರು ಅಲ್ಲದೆ ಗೌರವ ಶಿಕ್ಷಕರೂ ಸಹಕರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರೇ ಕಾಫಿ ಹಾಗೂ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ನಾಡ ಹಬ್ಬಗಳು ಸೇರಿದಂತೆ ಸರ್ಕಾರದ ಎಲ್ಲಾ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ವಿವಿಧ ತಾಲೂಕು ಮಟ್ಟದ ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಇಲ್ಲಿಯೇ ನಡೆಯುತ್ತವೆ. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಅಚ್ಚುಕಟ್ಟಾಗಿ ಮಾಡುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ಪಾಠ ಹೇಳುವದರ ಜೊತೆಗೆ ಬಿಸಿಯೂಟಕ್ಕೆ ನೀರಿನ ವ್ಯವಸ್ಥೆಯಲ್ಲಿ ಅಡಚಣೆ ಆದಾಗ ಅದನ್ನು ನಿಭಾಯಿಸುವ ಹೊಣೆಯೂ ಶಿಕ್ಷಕರದ್ದೆ.