ತಲೆಮರೆಸಿಕೊಂಡ ಕೊಲೆ ಆರೋಪಿ ಪಿಎಂಒ ಸಚಿವ ಜಿತೇಂದ್ರ ಸಿಂಗ್ ಮನೆಯಲ್ಲಿ !
ಹೊಸದಿಲ್ಲಿ ,ಮಾ.14: 2013ರಲ್ಲಿ ಜಮ್ಮು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಹುಡುಕುತ್ತಿದ್ದ , ತಲೆಮರೆಸಿಕೊಂಡ ಆರೋಪಿ ಎಂದು ನ್ಯಾಯಾಲಯ ಘೋಷಿಸಿರುವ ಬಿಜೆಪಿ ನಾಯಕನೊಬ್ಬ ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರ ಅಧಿಕೃತ ನಿವಾಸದಲ್ಲಿ ಕಂಡು ಬಂದಿದ್ದಾನೆ. ಅಂದು ಅಲ್ಲಿ ತೆಗೆದ ಫೋಟೋದಲ್ಲಿ ಸಚಿವ ಜಿತೇಂದ್ರ ಸಿಂಗ್ ಹಾಗು ಕಿಶ್ತ್ವಾರ್, ದೋಡ ಹಾಗು ಭಾದೆರ್ವ ಗಳ ಬಿಜೆಪಿ ಶಾಸಕರ ಜೊತೆ ಈ ಆರೋಪಿ ಹರಿ ಕ್ರಿಶನ್ ಅಲಿಯಾಸ್ ಕಸೂರು ಕೂಡ ಇದ್ದ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.
2013 ರಲ್ಲಿ ಕಿಶ್ತ್ವಾರ್ ನಲ್ಲಿ ಕೋಮು ಗಲಭೆ ನಡೆದಿದ್ದಾಗ ತನ್ನ ಗಾಯಾಳು ಮಗ ಹಾಗು ಸೋದರನನ್ನು ಕರೆದುಕೊಂಡು ಹೋಗುತ್ತಿದ್ದ 52 ವರ್ಷ ವಯಸ್ಸಿನ ಲಸ್ಸ ಖಂಡೆ ಎಂಬವರನ್ನು ಕೊಲೆ ಮಾಡಿದ ಆರೋಪ ಹರಿ ಕ್ರಿಶನ್ ಹಾಗು ಇತರ ಒಂಬತ್ತು ಮಂದಿಯ ಮೇಲಿದೆ.
ಹರಿ ಕ್ರಿಶನ್ ಜೊತೆ ಯಾವುದೇ ಸಂಬಂಧವನ್ನು ತಳ್ಳಿ ಹಾಕಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಆತ ಬಿಜೆಪಿ ಶಾಸಕ ಸುನಿಲ್ ಶರ್ಮ ಅವರ ನಿಯೋಗವೊಂದರ ಜೊತೆ ಬಂದಿದ್ದ ಎಂದು ಹೇಳಿದ್ದಾರೆ. " ನಾವು ಪ್ರತಿದಿನ ಬಹಳಷ್ಟು ಮಂದಿಯನ್ನು ಭೇಟಿಯಾಗುತ್ತೇವೆ. ಅದರಲ್ಲಿ ಹಲವರ ಪರಿಚಯ ನಮಗಿರುವುದಿಲ್ಲ " ಎಂದು ಅವರು ಹೇಳಿದ್ದಾರೆ.
ಪಿಡಿಪಿ - ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಶರ್ಮ ಅವರು ಹರಿ ಕ್ರಿಶನ್ ನಿಯೋಗದಲ್ಲಿದ್ದ ವಿಷಯ ಬರೆಯಬೇಡಿ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿಗಾರರಿಗೆ ಹೇಳಿದ್ದಾರೆ. " ನಮ್ಮ ಜನರ ಬಗ್ಗೆಯೇ ಮಾತನಾಡುವುದು ಸರಿಯಲ್ಲ " ಎಂದೂ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿನಿಧಿಸುವ ಉಧಮ್ಪುರ್ ಲೋಕಸಭಾ ಕ್ಷೇತ್ರದಲ್ಲೇ ಕಿಶ್ತ್ವಾರ್ ವಿಧಾನ ಸಭಾ ಕ್ಷೇತ್ರ ಬರುತ್ತದೆ. ಸಿಂಗ್ ಹಾಗು ಶರ್ಮ ಅವರಿಬ್ಬರ ಚುನಾವಣಾ ಪ್ರಚಾರದಲ್ಲೂ ಹರಿ ಕ್ರಿಶನ್ ಭಾಗವಹಿಸಿದ್ದ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ತಿಳಿಸಿದೆ.
courtesy : Indian Express