×
Ad

ಆಮಂತ್ರಣ ಮರು ಮುದ್ರಿಸಲು ಕ್ರಮ- ಶಾಸಕಿ ಶಕುಂತಳಾ ಶೆಟ್ಟಿ

Update: 2016-03-14 18:32 IST

 ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಗಳ ಹೆಸರು ಮುದ್ರಿಸಿರುವುದರಿಂದ ಗೊಂದಲ ಸೃಷ್ಠಿಯಾಗಿದ್ದು, ತಾನು ಪುತ್ತೂರು ಶಾಸಕಿಯಾದ ಬಳಿಕ ಪುತ್ತೂರಿನಲ್ಲಿ ಯಾವುದೇ ಕೋಮು ಅಥವಾ ಇನ್ನಿತರ ಜನಾಂಗ ಗಲಭೆಗಳು ನಡೆಯಲು ಅವಕಾಶ ನೀಡಿಲ್ಲ. ಈ ವಿಚಾರವನ್ನೂ ತಾನು ಗಂಭೀರವಾಗಿ ಪರಿಗಣಿಸಿದ್ದು, ಮರುಮುದ್ರಿಸಿಯೇ ಸಿದ್ಧ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ವಿವಾದದ ವಸ್ತುವಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಮಂತ್ರಣ ಪತ್ರಿಕೆಗೆ ತಾರ್ಕಿಕ ಅಂತ್ಯ ಹಾಡಲು ಮುಂದಾಗಿದ್ದಾರೆ. ದೇವಳದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರು ಹಾಕುವುದು ತಪ್ಪೇನಲ್ಲ. ಆದರೆ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕಲಂ 7ರ ಪ್ರಕಾರ ಹಿಂದೂಯೇತರ ವ್ಯಕ್ತಿಯ ಹೆಸರು ಹಾಕುವಂತಿಲ್ಲ. ಸೌಹಾರ್ದತೆ ಮುರಿಯುವ ಕೆಲಸಕ್ಕೆ ಅವಕಾಶ ನೀಡದಂತೆ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಿಸಲು ಸೂಚಿಸಲಾಗುವುದು. ಒಂದು ವೇಳೆ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸ್ವಂತ ಖರ್ಚಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟವಾಗಿ ತಿಳಿಸಿದರು.
ದೇವಳದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಹಾಕಿರುತ್ತಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಎ.ಬಿ.ಇಬ್ರಾಹಿಂ ಹೆಸರು ಹಾಕಿರುವುದು ಕಾನೂನು ತೊಡಕಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಗಮನಕ್ಕೆ ಬಾರದ ಕಾರಣ ತೊಂದರೆ ಸೃಷ್ಟಿಯಾಗಿರುವ ಸಾಧ್ಯತೆ ಇದೆ. ಏನೇ ಇದ್ದರೂ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಖ್ಯ. ದೇವರಿಗೆ ಅವಮಾನ ಆಗುವಂತಹ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ. ಹಾಗೆಂದು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಜಾತ್ರೆ ಸರಿಯಾಗಿ ನಡೆಯಲು, ಸೌಹಾರ್ದತೆ ಮೆರೆಯುವ ಉದ್ದೇಶದಿಂದ ಆಮಂತ್ರಣ ಪತ್ರಿಕೆ ಮರು ಮುದ್ರಿಸಲಾಗುವುದು ಎಂದರು.
ದೇವಳದ ಜಾತ್ರೆ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ಭಕ್ತಾದಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ಗೊಂದಲಗಳನ್ನು ಪರಿಹರಿಸಲಾಗುವುದು. ಸೌಹಾರ್ದತೆ ಮುರಿಯುವ ವಾತಾವರಣಕ್ಕೆ ಈ ಹಿಂದೆಯೂ ಅವಕಾಶ ನೀಡಲಿಲ್ಲ. ಮುಂದೆಯೂ ಅವಕಾಶ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News