ಪುತ್ತೂರು: ಮಾ. 18 ರಿಂದ 20 ಬನ್ನೂರಿನ ಕರ್ಮಲದಲ್ಲಿ ಜಾತ್ರೋತ್ಸವ
ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ. 18 ರಿಂದ 20ರ ತನಕ ವರ್ಷಾವಧಿ ಜಾತ್ರೆ, ನಾಗಪ್ರತಿಷ್ಠೆ ಮತ್ತು ನೇಮೋತ್ಸವ ಜರುಗಲಿದೆ ಎಂದು ದೇವಳದ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾ. 17ರಂದು ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯರವರ ನೇತೃತ್ವದಲ್ಲಿ ವಿವಿಧ ದಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಮಾ. 18ರಂದು ಬೆಳಿಗ್ಗೆ ಮಹಾಗಣಪತಿ ಹವನ, ಕಲಶ ಪೂಜೆ, ಬಳಿಕ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆಯಲ್ಲಿ ಶ್ರೀ ನಾಗ ದೇವರ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ. ಸಂಜೆ ಧಾರ್ಮಿಕ ಸಭೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರೈ ಎಸ್ಟೇಟ್ ಕೋಡಿಂಬಾಡಿಯ ಉದ್ಯಮಿ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟ್ವಾಳದ ಶ್ರೀ ಉಗ್ರನರಸಿಂಹ ದೇವಸ್ಥಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ನಗರಸಭಾ ಸದಸ್ಯ ವಿಶ್ವನಾಥ ಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿ ಕಾರ್ಯಕ್ರಮ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ ಮಾ. 19ರಂದು ನಿತ್ಯ ಧಾರ್ಮಿಕ ವಿಧಿವಿಧಾನಗಳು ನಡೆದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣರವರು ಆಶೀರ್ವಚನ ನೀಡಲಿದ್ದಾರೆ. ಅರಣ್ಯ, ಪರಿಸರ, ಜೀವಿ ಶಾಸ್ತ್ರ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕಾವು ಹೇಮನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8 ರಿಂದ ಶ್ರೀ ದೇವರ ಮಹಾಪೂಜೆ, ಜಾತ್ರೆಯ ಬಲಿ ಹೊರಟು, ಉತ್ಸವ, ದರ್ಶನ ಬಲಿ ಬಟ್ಟಲು ಕಾನಿಕೆಯೊಂದಿಗೆ ಕರ್ಮಲ ಜಾತ್ರೆ ಜರುಗಲಿದೆ ಎಂದು ಅವರು ಹೇಳಿದರು. ರಾತ್ರಿ ಗಂಟೆ 10 ರಿಂದ ಇನ್ಫೋ ಮೀಡಿಯಾ ಕ್ರಿಯೇಷನ್‌ರವರ ತುಳು ಚಿತ್ರ ’ಸತ್ಯೊದ ಕಲ್ಕುಡ ಕಲ್ಲುರ್ಟಿ’ ಚಿತ್ರ ಪ್ರದರ್ಶನಗೊಳ್ಳಲಿದೆ. ಮಾ. 20ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಶ್ರೀ ದೇವಿಯ ದರ್ಶನ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಶ್ರೀ ಶಿವರಾಮ ಸಪಲ್ಯ ಕುಮೇರಡ್ಕರವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 9.30ಕ್ಕೆ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಸಂಚಾಲಕ ಕೆ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಬುಡ್ಲೆಗುತ್ತು ದಿನಕರ ಗೌಡ, ಕಾರ್ಯದರ್ಶಿ ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.