×
Ad

ಮೂಡುಬಿದಿರೆ : ಶಿಕ್ಷಣ, ಆತ್ಮವಿಶ್ವಾಸದಿಂದ ಹೆಣ್ಣಿನ ಘನತೆ ಹೆಚ್ಚಳ : ಡಾ.ಬಿ.ಟಿ.ಲಲಿತಾ ನಾಯ್ಕಿ

Update: 2016-03-14 18:42 IST

ಮೂಡುಬಿದಿರೆ : ನಾರಿ ಶಕ್ತಿ ಒಬ್ಬ ಪುರುಷನ ಶಕ್ತಿಯೂ ಆಗಿದೆ. ಸ್ತ್ರೀ ಪುರುಷನಾಗಿ, ಪುರುಷ ಸ್ತ್ರೀಯಾಗಿ ಮನಸ್ಸನ್ನು ಅರಿತರೆ ಪರಿಪೂರ್ಣ ಮನುಷ್ಯರಾಗಲು ಸಾಧ್ಯ. ಹೆಣ್ಣು ಉತ್ತಮ ಶಿಕ್ಷಣವನ್ನು ಪಡೆದು, ಆತ್ಮವಿಶ್ವಾಸದಿಂದ ಗೌರವಯುತವಾಗಿ ಬದುಕಿದರೆ ಆಕೆಯ ಘನತೆ ಹೆಚ್ಚುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಾ.ಬಿ.ಟಿ.ಲಲಿತಾ ನಾಯ್ಕಾ ಹೇಳಿದರು.  ಅವರು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಅಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ನಡೆದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.  ಮಹಿಳೆಯರು ತಮ್ಮ ಜೀವನವನ್ನು ಸರಳ ರೀತಿಯಲ್ಲಿ ನಡೆಸಬೇಕು. ಹೆಣ್ಣು ಮತ್ತು ಗಂಡಿಗೆ ಉತ್ತಮ ಸಂಸ್ಕಾರವನ್ನು ನೀಡುವ ಕೆಲಸ ಮನೆಯಿಂದಲೇ ಹೆತ್ತವರಿಂದ ಆಗಬೇಕಾಗಿದೆ. ಯಾವುದೇ ತೊಂದರೆಗಳಲ್ಲಿ ಸಿಲುಕದಂತೆ ಎಚ್ಚರಿಕೆಯಿಂದಿರಬೇಕು. ಮಹಿಳೆಯರು ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಸವಾಲುಗಳನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಿ ಜನಮುಖಿಗಳಾಗಿ, ಜನಚಿಂತಕರಾಗಿ ಶಕ್ತಿ ತುಂಬುವಂತಹ ಕೆಲಸಗಳನ್ನು ಮಾಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅವಿಭಜಿತ ದ.ಕ, ಉಡುಪಿ ಜಿಲ್ಲೆಯಲ್ಲಿ ಕೌಟುಂಬಿಕವಾಗಿ ಹೆಣ್ಣಿಗೆ ಹೆಚ್ಚಿನ ಗೌರವವಿದೆ. ಆಕೆ ಧರ್ಮದಲ್ಲಿ ಸಂಪತ್ತನ್ನು ಪಡೆದುಕೊಂಡು ಕಾಮವನ್ನು ನಿಗ್ರಹದಲ್ಲಿಟ್ಟುಕೊಂಡು ಮೋಕ್ಷವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಂಡವಳು. ಆದರೆ ಪುಟ್ಟ ಹೆಣ್ಣು ಮಗುವಿನ ಮೇಲೆ, 80ರ ಹರೆಯದ ಅಜ್ಜಿಯ ಮೇಲೆ ಪುರುಷರ ಕೆಟ್ಟ ದೃಷ್ಠಿ ಬೀಳುತ್ತಿರುವ ಬಗ್ಗೆ ಆತಂಕವಾಗುತ್ತಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.  ಸನ್ಮಾನ : ರಾಷ್ಟ್ರಮಟ್ಟದ ಪಾರಾ ಅಥ್ಲಿಟ್ ಪದ್ಮಶ್ರೀ ಡಾ.ಮಾಲತಿ ಹೊಳ್ಳ ಅವರನ್ನು ಇದೇ ಸಂದರ್ಭದಲ್ಲಿ ಡಾ.ಎಂ.ಮೋಹನ ಆಳ್ವ ಅವರು ಸನ್ಮಾನಿಸದರು. ಬಾಹ್ಯ ಸೌಂದರ್ಯ ಮತ್ತು ಆತಂರಿಕ ಸೌಂದರ್ಯದ ಬಗ್ಗೆ ಗಮನ ಹರಿಸದೆ ಆತ್ಮವಿಶ್ವಾಸದ ಕಡೆಗೆ ಗಮನವಿರಲಿ ಎಂದು ಡ. ಮಾಲತಿ ಹೊಳ್ಳ ಸನ್ಮಾನಕ್ಕೆ ಉತ್ತರಿಸಿದರು.  ಬೆಂಗಳೂರಿನ ಆಲಯೈನ್ಸ್ ವಿವಿಯ ಉಪಕುಲಪತಿ ಡಾ. ಪಾವನಾ ದಿಬ್ಬೂರ್, ಆಳ್ವಾಸ್‌ನ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಮೀನಾಕ್ಷಿ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಎಂಬಿಎ ಡೀನ್ ಅಲೆಕ್ಸಾಂಡರ್ ಮ್ಯಾಥ್ಯೂ ಉಪಸ್ಥಿತರಿದ್ದರು.

 ವಿದ್ಯಾರ್ಥಿನಿ ಲಾಸ್ಯ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ನವ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶೈನಿ ಜೋಸೆಫ್ ವಂದಿಸಿದರು.
  ಸಭಾ ಕಾರ್ಯಕ್ರಮದ ನಂತರ ಪದ್ಮಶ್ರೀ ಡಾ.ಮಾಲತಿ ಹೊಳ್ಳ ಮತ್ತು ಡಾ. ಪಾವನಾ ದಿಬ್ಬೂರ್ ಅವರಿಂದ ಸಂವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News