ಅಫ್ರಿದಿಗೆ ಲಾಹೋರ್ ಹೈಕೋರ್ಟ್‌ನಿಂದ ನೋಟಿಸ್
ಲಾಹೋರ್, ಮಾ.14: ಭಾರತದಲ್ಲಿ ಹಿಂದೆ ಆಡಿದಾಗ ಪಾಕ್‌ಗಿಂತ ಜಾಸ್ತಿ ಪ್ರೀತಿ ಮತ್ತು ಪ್ರೋತ್ಸಾಹ ಇಲ್ಲಿನ ಅಭಿಮಾನಿಗಳಿಂದ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ಇದೀಗ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಅವರಿಗೆ ಲಾಹೋರ್‌ನ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಶಾಹಿದ್ ಅಫ್ರಿದಿ ಹೇಳಿಕೆಯು ಪಾಕ್‌ನಲ್ಲಿ ವಿವಾದ ಸೃಷ್ಟಿಸಿದ್ದು, ವಕೀಲ ಅಝರ್ ಸಿದ್ದೀಕ್ ಸೋಮವಾರ ಅಫ್ರಿದಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಅಫ್ರಿದಿ ಹೇಳಿಕೆಯು ಪಾಕ್‌ನ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ನ್ಯಾಯಾಲಯವು ಈ ಸಂಬಂಧ 15 ದಿನಗಳ ಒಳಗಾಗಿ ವಿವರಣೆ ನೀಡುವಂತೆ ಅಫ್ರಿದಿಗೆ ನೋಟಿಸ್ ಜಾರಿ ಮಾಡಿದೆ.
ಅಫ್ರಿದಿ ಶನಿವಾರ ಸಂಜೆ ಭಾರತಕ್ಕೆ ಕಾಲಿರಿಸಿದ ಬೆನ್ನಲ್ಲೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಾರತದಲ್ಲಿ ತಮಗೆ ಈ ತನಕ ಸಿಕ್ಕಿರುವ ಆತಿಥ್ಯದ ಬಗ್ಗೆ ಶ್ಲಾಘಿಸಿದ್ದರು.
ಪಾಕಿಸ್ತಾನವು ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಎದುರಿಸಲಿದೆ. ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡಕ್ಕೆ ಸವಾಲು ನೀಡಲಿದೆ