×
Ad

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಬೃಹತ್ ಕಂಟೈನರ್, ಇಬ್ಬರಿಗೆ ಗಾಯ

Update: 2016-03-14 19:31 IST

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೈನರ್ ರಸ್ತೆ ಬದಿಯ ಕಮರಿಗೆ ಉರುಳಿಬಿದ್ದು, ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಕೂಟೇಲು ತಿರುವಿನಲ್ಲಿ ಸೋಮವಾರ ಸಂಜೆ ನಡೆದಿದ್ದು, ಅಪಘಾತದಿಂದಾಗಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದೆ.
ಘಟನೆಯಿಂದ ಕಂಟೈನರ್ ಚಾಲಕ ಸವದ್ರಾಮ್ ಹಾಗೂ ಸಹ ಚಾಲಕ ನೇಮಿಚಂದ್ರ ಗಾಯಗೊಂಡಿದ್ದಾರೆ. ಇವರು ರಾಜಸ್ತಾನ ಮೂಲದವರಾಗಿದ್ದು, ಇವರಲ್ಲಿ ಸವದ್ರಾಮ್ ತಲೆಗೆ ಗಂಭೀರ ಗಾಯಗಳಾಗಿವೆ. ಮಾರುತಿ ಕಾರುಗಳನ್ನು ಮಂಗಳೂರಿನ ಕಂಪನಿಯಲ್ಲಿ ಖಾಲಿಗೊಳಿಸಿ ಬೆಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಎದುರಿನಿಂದ ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಕಂಟೈನರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಮರಿಗೆ ಮಗುಚಿ ಬಿದ್ದಿದೆ.
 ಹಲವು ಅಪಘಾತ: ಅಪಘಾತವಾದ ಈ ಪ್ರದೇಶ ತಿರುವು ಪ್ರದೇಶವಾಗಿದ್ದು, ಇದೇ ಸ್ಥಳದಲ್ಲಿ ತಿಂಗಳಿಗೆ ಒಂದಾದರೂ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ಅಪಘಾತದಿಂದಾಗಿ ಈ ಪ್ರದೇಶದಲ್ಲಿ ಹಲವು ಜೀವಹಾನಿಯಾಗಿದೆ. ಅಲ್ಲದೇ, ನಾಲ್ಕೈದು ಬಾರಿ ಇಲ್ಲಿದ್ದ ವಿದ್ಯುತ್ ಕಂಬವೂ ಧರೆಗುರುಳಿತ್ತು. ಬಳಿಕ ಅಳವಡಿಸಲಾಗಿದ ಕಂಬವೂ ಅಪಘಾತವೊಂದಕ್ಕೆ ಸಿಕ್ಕಿ ಸ್ವಲ್ಪ ತುಂಡಾಗಿತ್ತು. ಕೊನೆಗೆ ಆ ವಿದ್ಯುತ್ ಕಂಬವನ್ನು ಮೆಸ್ಕಾಂನವರು ಅಲ್ಲಿಯೇ ಬಿಟ್ಟು, ಬದಲಿ ಜಾಗದಲ್ಲಿ ನೂತನ ಕಂಬ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡಿತ್ತು. ಆದರೆ ಸ್ವಲ್ಪ ಭಾಗ ತುಂಡಾಗಿ ತಂಡ ಇದೀಗ ಧರೆಗುರುಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News