ನನ್ನನು ಪ್ರಶ್ನಿಸುವವರು ಪೂರ್ವ ಗ್ರಹ ಪೀಡಿತರು: ಆಮಿರ್ ಖಾನ್
ಮುಂಬೈ,ಮಾ14: ಅಸಹಿಷ್ಣುತೆ ಕುರಿತು ತನ್ನ ಹೇಳಿಕೆಗಾಗಿ ಭಾರಿ ಟೀಕೆಗೊಳಗಾಗಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರು, ಸೋಮವಾರ ಇಲ್ಲಿ ದೇಶಪ್ರೇಮವನ್ನು ಸಮಾಜದತ್ತ ಸಂವೇದನೆ ಮತ್ತು ಹೃದಯಗಳಲ್ಲಿನ ಪ್ರೀತಿ ಎಂದು ವ್ಯಾಖ್ಯಾನಿಸಿದರು ಲಗಾನ್, ಮಂಗಲ ಪಾಂಡೆ ಮತ್ತು ರಂಗ್ ದೇ ಬಸಂತಿಯಂತಹ ದೇಶಪ್ರೇಮವನ್ನು ಮೆರೆದ ಚಿತ್ರಗಳಲ್ಲಿ ನಟಿಸಿರುವ ಆಮಿರ್, ತನ್ನ ಪಾಲಿಗೆ ದೇಶಭಕ್ತಿಯೆಂದರೆ ಸಮಾಜಕ್ಕೆ ಮತ್ತು ಜನರಿಗೆ ತಮ್ಮ ಬದುಕುಗಳನ್ನು ಉತ್ತಮಗೊಳಿಸಲು ನೆರವಾಗುವುದು ಎಂದು ಅರ್ಥ. ದೇಶಭಕ್ತಿಗಾಗಿ ವ್ಯಕ್ತಿ ತನ್ನ ಹೃದಯದಲ್ಲಿ ಪ್ರೀತಿಯನ್ನು, ಸಮಾಜ ಮತ್ತು ಜನರತ್ತ ಸಂವೇದನೆಯನ್ನು ಹೊಂದಿರುವುದು ಅಗತ್ಯವಾಗಿದೆ. ದೇಶಭಕ್ತಿಗೆ ತನ್ನ ಅರ್ಥ ಇದು ಎಂದು ಹೇಳಿದರು.
ತಾನೇನನ್ನೇ ಮಾಡಲಿ, ಕೆಲವರು ತನ್ನ ವಿರುದ್ಧ ಯಾವಾಗಲೂ ಪ್ರಶ್ನೆಗಳನ್ನು ಎತ್ತುತ್ತಲೇ ಇರುತ್ತಾರೆ ಎಂದು ಸೋಮವಾರ 51ನೇ ವರ್ಷಕ್ಕೆ ಕಾಲಿರಿಸಿದ ಅವರು ಹೇಳಿದರು.
ಬಹುಪಾಲು ಜನರಿಗೆ ತಾನೇನು ಎನ್ನುವುದು ಗೊತ್ತು. ಅವರೊಂದಿಗಿನ ತನ್ನ ಸಂಬಂಧ 27 ವರ್ಷಗಳಿಗೂ ಹಳೆಯದು. ಹೀಗಾಗಿ ತನ್ನನ್ನು ಪ್ರಶ್ನಿಸುವವರು ತನ್ನ ಬಗ್ಗೆ ಪೂರ್ವಾಗ್ರಹ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಾನೇನೇ ಮಾಡಲಿ...ಅವರು ಪ್ರಶ್ನಿಸುತ್ತಲೇ ಇರುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ತಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ನೀವು ಯಾರೇ ಆಗಿರಿ,ನೀವು ಜೀವನದಲ್ಲಿ ಏನನ್ನೇ ಮಾಡಿರಿ. ಜನರು ನಿಮ್ಮ ಬಗ್ಗೆ ಪ್ರಶ್ನೆಗಳನ್ನು, ಶಂಕೆಯನ್ನು ಎತ್ತುತ್ತಲೇ ಇರುತ್ತಾರೆ. ಒಂದೇ ವಿಷಯವೆಂದರೆ ನೀವು ನಕಾರಾತ್ಮಕರಾಗಿರಕೂಡದು. ನೀವು ಸಕಾರಾತ್ಮಕರಾಗಿರಬೇಕು ಮತ್ತು ನೀವು ಏನು ಮಾಡುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಿರಬೇಕು ಎಂದ ಅವರು, ನಿಮ್ಮ ಆತ್ಮಸಾಕ್ಷಿಯು ಸ್ಪಷ್ಟವಾಗಿರಬೇಕು. ನಿಮ್ಮ ಸಕಾರಾತ್ಮಕತೆ ಮತ್ತು ನಿಮ್ಮತ್ತ ಜನರ ಸಕಾರಾತ್ಮಕತೆಯ ಮೇಲೆ ನೀವು ಗಮನವನ್ನು ಕೇಂದ್ರೀಕರಿಸಬೇಕು. ಹೆಚ್ಚಿನ ಜನರು ಸಕಾರಾತ್ಮಕರೇ ಆಗಿರುತ್ತಾರೆ. ಆದರೆ ನಕಾರಾತ್ಮಕರು ಬಹಳ ಬೊಬ್ಬೆ ಹೊಡೆಯುತ್ತಿರುತ್ತಾರೆ, ಹೀಗಾಗಿ ನಾವು ನಕಾರಾತ್ಮಕ ವಿಷಯಗಳನ್ನೇ ಹೆಚ್ಚು ಕೇಳುತ್ತಿರುತ್ತೇವೆ. ನಕಾರಾತ್ಮಕ ಜನರ ಸಂಖ್ಯೆ ತೀರ ಸಣ್ಣದು,ಆದರೆ ಅವರು ಬೊಬ್ಬೆ ಹೊಡೆಯುವುದರಿಂದ ಅವರ ಸಂಖ್ಯೆ ಹೆಚ್ಚಿದೆ ಎಂದು ನಾವು ಭಾವಿಸುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ನೀರಿನ ಬಿಕ್ಕಟ್ಟನ್ನು ಸುಧಾರಿಸಲು ಬಿಜೆಪಿ ನೇತೃತ್ವದ ಸರಕಾರದೊಡನೆ ಕೈ ಜೋಡಿಸಿರುವ ಆಮಿರ್, ಈ ವರ್ಷ ಒಣ ಹೋಲಿಯನ್ನು ಆಚರಿಸುವಂತೆ ಜನರನ್ನು ಕೋರಿಕೊಂಡರು.
ತಾನು ಹೋಲಿಯ ದಿನವೇ ಜನಿಸಿದ್ದೇನೆ. ಹೀಗಾಗಿ ಕನಿಷ್ಠ ಪ್ರಮಾಣದಲ್ಲಿ ನೀರನ್ನು ಬಳಸುವಂತೆ ಪ್ರತಿಯೊಬ್ಬರನ್ನೂ ಕೋರುತ್ತಿದ್ದೇನೆ ಎಂದರು.